ಮುಂಡಗೋಡ: ತಾಲೂಕಾದ್ಯಂತ ವನ್ಯಪ್ರಾಣಿಗಳಿಂದ ಉಂಟಾಗುತ್ತಿರುವ ಬೆಳೆನಷ್ಟ ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆಯು ನಿರ್ಲಕ್ಷಿಸುತ್ತಿರುವುದು ಖಂಡನಾರ್ಹ. ಅರಣ್ಯ ಇಲಾಖೆಯ ನಿರ್ಲಕ್ಷ್ಯತೆ ರೈತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ತಕ್ಷಣ ಅರಣ್ಯ ಇಲಾಖೆಯು ಈ ದಿಶೆಯಲ್ಲಿ ಸಕ್ರಿಯವಾಗುವುದರೊಂದಿಗೆ ನಷ್ಟಕ್ಕೆ ಪರಿಹಾರವನ್ನು ಬಿಡುಗಡೆಗೊಳಿಸಬೇಕೆಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಆಗ್ರಹಿಸಿದರು.
ಇತ್ತೀಚಿನ ದಿನಗಳಲ್ಲಿ ತಾಲೂಕಾದ್ಯಂತ ಕಂದಾಯ ಮತ್ತು ಅರಣ್ಯ ಅತಿಕ್ರಮಣದಾರರ ಸಾಗುವಳಿ ಪ್ರದೇಶದ ಬೆಳೆಗಳು ವನ್ಯಪ್ರಾಣಿಗಳಿಂದ ನಷ್ಟವಾಗುತ್ತಿದ್ದರೂ ಅರಣ್ಯ ಇಲಾಖೆ ಮತ್ತು ಸರಕಾರದಿಂದ ರಕ್ಷಣೆ ಮತ್ತು ಪರಿಹಾರ ಘೋಷಣೆ ಆಗದಿರುವ ಹಿನ್ನೆಲೆಯಲ್ಲಿ ಮೇಲಿನಂತೆ ಪ್ರತಿಕ್ರಿಯೆ ನೀಡಿದರು.
ಭತ್ತ, ಗೊಂಜೋಳ, ಕಬ್ಬು ಮುಂತಾದ ಬೆಳೆಗಳನ್ನು ಜೀವನಾಧಾರಕ್ಕೆ ಕಂದಾಯ ಮತ್ತು ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಬೆಳೆಗಳ ಮೇಲೆ ವನ್ಯ ಪ್ರಾಣಿಗಳಿಂದ ಪ್ರತಿವರ್ಷವೂ ನಷ್ಟ, ತೊಂದರೆ ಉಂಟಾಗುತ್ತಿರುವುದು ರೈತಪರ ಆರ್ಥಿಕ ಸ್ಥಿತಿಗೆ ತುಂಬಾ ತೊಂದರೆ ಉಂಟಾಗುತ್ತಿದ್ದರೂ ಆರಣ್ಯ ಇಲಾಖೆ ವನ್ಯ ಪ್ರಾಣಿಗಳನ್ನ ನಿಯಂತ್ರಿಸುವಲ್ಲಿ ಇಂದಿಗೂ ಕ್ರೀಯಾಯೋಜನೆ ರಚಿಸುವಲ್ಲಿ ಸಂಪೂರ್ಣ ವಿಫಲವಾಗಿರುವುದು ಖೇದಕರ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸುತ್ತಾ, ಸರಕಾರ ಈ ದಿಶೆಯಲ್ಲಿ ರೈತರಿಗೆ ರೈತಪರವಾದ ನಿಲುವನ್ನು ತೆಗೆದುಕೊಳ್ಳಬೇಕೆಂದು ಅವರು ಆಗ್ರಹಿಸಿದರು. ಅಲ್ಲದೇ, ವರ್ಷ ಪ್ರತಿ ವನ್ಯಪ್ರಾಣಿಗಳಿಂದ ಬೆಳೆನಷ್ಟವಾದರೂ ಸಮರ್ಪಕವಾಗಿ ಪರಿಹಾರ ಸಿಗದೇ ಇರುವುದು ಖೇದಕರ. ಅರಣ್ಯ ಇಲಾಖೆ ಶಾಶ್ವತ ಪರಿಹಾರ ಜರುಗಿಸುವಲ್ಲಿ ಕಾರ್ಯಪ್ರವರ್ತರಾಗಬೇಕೆಂದು ರವೀಂದ್ರ ನಾಯ್ಕ ಹೇಳಿದರು.
ನಷ್ಟಕ್ಕೆ ಪರಿಹಾರ ಕೊಡಿ:
ಜೀವನಕ್ಕೆ ಆಧಾರವಾಗಿರುವ ಬೆಳೆ ನಷ್ಟವಾಗಿದ್ದು, ಮುಂದಿನ ಜೀವನ ನಡೆಸುವುದು ಕಷ್ಟವಾಗಿದೆ. ಈ ದಿಶೆಯಲ್ಲಿ ಸರಕಾರ ಪರಿಹಾರ ನೀಡಬೇಕೆಂದು ವನ್ಯಪ್ರಾಣಿಗಳಿಂದ ನಷ್ಟಕ್ಕೆ ಒಳಗಾಗಿರುವ ಚೌಡಳ್ಳಿ ಗ್ರಾಮ ಪಂಚಾಯಿತಿ ಬಸವಂತಪ್ಪ ಶಿಡ್ಲಾಪುರ ಅವರು ಹೇಳಿದ್ದಾರೆ.