ಶಿರಸಿ: ತಾಲೂಕಿಗೆ ಅನುಕೂಲವಾಗುವ ದೃಷ್ಟಿಯಲ್ಲಿ, ಮತ್ತು ಉತ್ತರ ಕನ್ನಡ ಜಿಲ್ಲೆಯ ಇನ್ನಿತರ ತಾಲೂಕಿನ ಜನತೆಗೂ ಹೆಚ್ಚು ಅನುಕೂಲ ಕಲ್ಪಸಿಕೊಡುವ ಉದ್ದೇಶದಿಂದ ನಗರದಲ್ಲಿ ಕೋವಿಡ್ ಲ್ಯಾಬ್ ಸ್ಥಾಪನೆಗೆ ಅಂತಿಮ ಹಂತದ ಸಿದ್ಧತೆ ವೇಗ ಪಡೆದುಕೊಂಡಿದ್ದು, ಸೋಮವಾರ ಸಂಜೆ ಎರಡು ಆರ್.ಟಿ.ಪಿ.ಸಿ.ಆರ್. ಯಂತ್ರ ಪೂರೈಕೆ ಆಗಿದೆ.
ಪಂಡಿತ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣಗೊಂಡಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಹಿಂಬದಿಯಲ್ಲಿ ಪ್ರಯೋಗಾಲಯ ಸ್ಥಾಪನೆಗೆ ಸಿವಿಲ್ ಕೆಲಸ ಮುಗಿಸಲಾಗಿತ್ತು. ಅಗತ್ಯ ಯಂತ್ರೋಪಕರಣಗಳ ಪೂರೈಕೆಗೆ ವಿಳಂಬವಾಗಿತ್ತು. ನಂತರ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡ ಆರ್.ಟಿ.ಪಿ.ಸಿ.ಆರ್ ಯಂತ್ರ ಸೇರಿದಂತೆ ಲ್ಯಾಬ್‍ಗೆ ಅಗತ್ಯವಿರುವ ಸೌಕರ್ಯ ಒದಗಿಸುವ ಕುರಿತು ಆರೋಗ್ಯ ಇಲಾಖೆ ಉನ್ನತ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಇಲಾಖೆ ಪ್ರಯೋಗಾಲಯ ಕೆಲಸ ಪೂರ್ಣಗೊಳಿಸಲು ತ್ವರಿತ ಸಿದ್ಧತೆ ನಡೆಸಲಾರಂಭಿಸಿತ್ತು.
‘ನಾಲೈದು ದಿನದೊಳಗೆ ಆರ್.ಎನ್.ಎ.ಎಕ್ಸಟ್ರಾಕ್ಟರ್ ಯಂತ್ರ ಬರಲಿದೆ. ಆ ಬಳಿಕ ಪ್ರಯೋಗಾಲಯದಲ್ಲಿ ತಾಂತ್ರಿಕ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಐ.ಸಿ.ಎಂ.ಆರ್. ಮಾರ್ಗಸೂಚಿ ಆಧರಿಸಿ, ಅಂತಿಮ ಅನುಮತಿ ಪಡೆದ ಬಳಿಕ ಕೋವಿಡ್ ಪತ್ತೆ ಕೆಲಸ ಆರಂಭಗೊಳ್ಳುತ್ತದೆ. ಮುಂದಿನ ಹದಿನೈದು ದಿನದೊಳಗೆ ಇದು ಸಾಧ್ಯವಾಗುವ ಗುರಿ ಇಟ್ಟುಕೊಂಡಿದ್ದೇವೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರದ್ ನಾಯಕ ತಿಳಿಸಿದ್ದಾರೆ.