ಯಲ್ಲಾಪುರ: ತಾಲೂಕಿನ ವಜ್ರಳ್ಳಿ ಗ್ರಾ.ಪಂ ವ್ಯಾಪ್ತಿಯ ತಳೆಕಬೈಲ್ ಬಳಿ ಕಳೆದ ತಿಂಗಳು ಭೂಕುಸಿತದಿಂದ ಕೈಗಾ-ಇಳಕಲ್ ರಾಜ್ಯ ಹೆದ್ದಾರಿ ಸಂಪರ್ಕ ಕಡಿತವಾದ ಸ್ಥಳ ಇದೀಗ ಪ್ರವಾಸಿ ಸ್ಥಳವಾಗಿ ಮಾರ್ಪಟ್ಟಿದೆ.
ತಳಕೆಬೈಲ್ ಬಳಿ ರಸ್ತೆ ಪಕ್ಕದ ಗುಡ್ಡ ಕುಸಿದು ವ್ಯಾಪಕವಾಗಿ ಮರ-ಗಿಡಗಳು ನಾಶವಾಗಿವೆ. ಕೈಗಾ-ಇಳಕಲ್ ರಾಜ್ಯ ಹೆದ್ದಾರಿಯೇ ಕುಸಿದು ಹೋಗಿ ಸಂಪರ್ಕ ಕಡಿತಗೊಂಡಿದೆ. ಗುಡ್ಡ ಕುಸಿತವಾದ ಸ್ಥಳದಲ್ಲಿ ನೀರಿನ ಬುಗ್ಗೆಗಳು ಎದ್ದಿದ್ದು, ಹಳ್ಳವಾಗಿ ನೀರು ಹರಿಯುತ್ತಿದೆ. ಸುತ್ತಮುತ್ತ ಗುಡ್ಡ, ರಸ್ತೆಗಳು ಬಿರುಕು ಬಿಟ್ಟಿದ್ದು, ಕುಸಿಯುವ ಹಂತದಲ್ಲೇ ಇದೆ.
ಈ ಸ್ಥಳ ಕಳೆದ ಕೆಲ ದಿವಸಗಳಿಂದ ಪ್ರೇಕ್ಷಣೀಯ ಸ್ಥಳವಾಗಿ ಮಾರ್ಪಟ್ಟಿದೆ. ತಾಲೂಕಿನ ವಿವಿಧೆಡೆಯಿಂದ ಭೂಕುಸಿತ ಪ್ರದೇಶ ವೀಕ್ಷಣೆಗೆ ಪ್ರತಿನಿತ್ಯ ನೂರಾರು ಜನರು ಬರುತ್ತಿದ್ದಾರೆ. ವಾರಾಂತ್ಯದ ದಿನಗಳಲ್ಲಿ ಹುಬ್ಬಳ್ಳಿ, ಧಾರವಾಡ ಸೇರಿದಂತೆ ಹೊರ ಜಿಲ್ಲೆಯ ಜನರೂ ಬಂದು ಭೂಕುಸಿತ ವಲಯವನ್ನು ವೀಕ್ಷಿಸುತ್ತಿದ್ದಾರೆ.
ಅಪಾಯಕ್ಕೆ ಆಹ್ವಾನ:
ಭೂಕುಸಿತವಾದ ಸ್ಥಳ ನೋಡಲು ಬರುವ ಜನರು ತುದಿಯವರೆಗೂ ಹೋಗಿ ಹಾನಿಯನ್ನು ವೀಕ್ಷಿಸುತ್ತಿದ್ದಾರೆ. ಕುಸಿತವಾದ ರಸ್ತೆಯ ಎರಡೂ ಕಡೆಗಳಲ್ಲಿ ಯಾವುದೇ ಸುರಕ್ಷತೆ ಇಲ್ಲದಿರುವುದರಿಂದ ನೋಡಲು ಹೋದವರು ಆಯ ತಪ್ಪಿದರೆ ಪ್ರಪಾತಕ್ಕೆ ಬಿದ್ದು ಅಪಾಯಕ್ಕೆ ಸಿಲುಕುವುದು ಖಚಿತ. ಮಳೆ ಜೋರಾದಲ್ಲಿ ಕುಸಿತ ಮುಂದುವರಿಯುವ ಸಾಧ್ಯತೆಯಿದ್ದು, ಜನತೆ ಈ ಅಪಾಯವನ್ನು ಲೆಕ್ಕಿಸದೇ ತುತ್ತತುದಿಯವರೆಗೂ ಹೋಗುತ್ತಿದ್ದಾರೆ. ಅಲ್ಲದೇ ತುದಿಯಲ್ಲಿ ನಿಂತು ಸೆಲ್ಫಿ, ಫೆÇಟೊ ಕ್ಲಿಕ್ಕಿಸುವುದು ಇತ್ಯಾದಿ ಮಾಡುತ್ತಿದ್ದಾರೆ.
ಭೂಕುಸಿತ ಪ್ರದೇಶದಲ್ಲಿ ದೂರದಿಂದಲೇ ವೀಕ್ಷಿಸುವಂತೆ ಹಾಗೂ ಮುಂದೆ ಅಪಾಯವಿದೆ ಎಂಬ ಸೂಚನೆ ನೀಡುವ ಫಲಕವನ್ನು ಸಂಬಂಧಪಟ್ಟ ಅಧಿಕಾರಿಗಳು ಅಳವಡಿಸಿ, ಜಾಗೃತಿ ಮೂಡಿಸಬೇಕು. ಜತೆಗೆ ಮುಂದೆ ಹೋಗದಂತೆ ತಡೆಯನ್ನು ನಿರ್ಮಿಸುವ ಬಗೆಗೆ ಕ್ರಮ ಕೈಗೊಳ್ಳುವ ಅಗತ್ಯವಿದೆ.
ಪ್ರತಿದಿನ ಭೂಕುಸಿತ ವಲಯ ವೀಕ್ಷಣೆಗೆ ನೂರಾರು ಜನ ಬರುತ್ತಿದ್ದಾರೆ. ಗುಡ್ಡದ ತುದಿಯವರೆಗೆ ಹೋಗಿ ಪ್ರಪಾತವನ್ನು ವೀಕ್ಷಿಸುವ ಸಾಹಸ ಮಾಡುತ್ತಿದ್ದಾರೆ. ಅಲ್ಲಿ ಯಾವ ಸುರಕ್ಷತೆಯೂ ಇಲ್ಲ. ಯಾರಾದರೂ ಪ್ರಪಾತದಲ್ಲಿ ಬಿದ್ದು ಅವಘಡ ಉಂಟಾದರೆ ಹೊಣೆ ಯಾರು?
– ಶ್ರೀಪಾದ ಗಾಂವ್ಕಾರ, ಸ್ಥಳೀಯ
ತಳಕೆಬೈಲ್ ಬಳಿ ಭೂಕುಸಿತವಾದ ಪ್ರದೇಶದಲ್ಲಿ ಜನ ಮುಂದಕ್ಕೆ ಹೋಗಿ ಅಪಾಯಕ್ಕೆ ಸಿಲುಕದಂತೆ ತಡೆಯಲು ಕ್ರಮ ಕೈಗೊಳ್ಳಲಾಗುವುದು. ಸೂಚನಾ ಫಲಕ ಅಳವಡಿಸುವ ಜತೆಗೆ ತಡೆಯನ್ನು ನಿರ್ಮಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು.
– ಶ್ರೀಕೃಷ್ಣ ಕಾಮಕರ್, ತಹಸೀಲ್ದಾರ