ಬೆಂಗಳೂರು: ರಾಜ್ಯದಲ್ಲಿ ಆಗಸ್ಟ್ 23 ರಿಂದ ಶಾಲೆಗಳು ಮತ್ತೆ ಆರಂಭವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದೆ.
ಆಗಸ್ಟ್ 23 ರಿಂದ ತೊಡಗಿದಂತೆ 9 ಮತ್ತು 10 ನೇ ತರಗತಿಗಳು ಆರಂಭವಾಗಲಿದ್ದು, ಅರ್ಧ ದಿನ ಮಾತ್ರವೇ ತರಗತಿಗಳು ನಡೆಯಲಿವೆ. ಕೊರೋನಾ ಸೋಂಕಿತರ ಪ್ರಮಾಣ 2% ಗಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ 1- 10 ನೇ ತರಗತಿ ವರೆಗೆ ಪರ್ಯಾಯ ಕಲಿಕಾ ವಿಧಾನಗಳ ಮೂಲಕ ಬೋಧನೆ ಪ್ರಕ್ರಿಯೆಗಳನ್ನು ಆರಂಭಿಸುವಂತೆ ಸರ್ಕಾರ ಮಾರ್ಗಸೂಚಿಯಲ್ಲಿ ನಿರ್ದೇಶಿಸಿದೆ.
ಕೊರೋನಾ ಸೋಂಕಿನ ಪ್ರಮಾಣ 2% ಗಿಂತ ಕಡಿಮೆ ಇರುವ ಜಿಲ್ಲೆಗಳ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ 9 ಮತ್ತು 10 ನೇ ತರಗತಿಗಳ ಆರಂಭಕ್ಕೆ ಸಂಬಂಧಿಸಿದಂತೆ ಕೆಲವು ಕ್ರಮಗಳನ್ನು ಸೂಚಿಸಿದೆ. ಅದರನ್ವಯ ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 10-1.30 ಗಂಟೆಯವರೆಗೆ ತರಗತಿಗಳು ನಡೆಯಲಿವೆ. ಶನಿವಾರ ಬೆಳಿಗ್ಗೆ 10 ರಿಂದ 12.30 ವರೆಗೆ ತರಗತಿಗಳು. ಶಾಲೆಗೆ ಬರಲು ಪೆÇೀಷಕರ ಅನುಮತಿ ಪತ್ರ ಕಡ್ಡಾಯವಾಗಿದೆ. ಮಕ್ಕಳಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯವಾಗಿದೆ. ವಿದ್ಯಾರ್ಥಿಗಳು ಮನೆಯಿಂದಲೇ ಊಟ/ಉಪಹಾರ ತರಬೇಕು. ವಿದ್ಯಾರ್ಥಿಗಳಿಗೆ ಮಾಸ್ಕ್ ಕಡ್ದಾಯ. ಶಾಲೆಗಳಲ್ಲಿ ವಿದ್ಯಾರ್ಥಿಗಳ ಭೌತಿಕ ಹಾಜರಾತಿ ಕಡ್ಡಾಯವಲ್ಲ, ಆನ್ ಲೈನ್ ಅಥವಾ ಪರ್ಯಾಯ ವಿಧಾನದಲ್ಲೂ ಹಾಜರಾಗಬಹುದು ಎಂದು ತಿಳಿಸಲಾಗಿದೆ. ಶಾಲೆಗಳಲ್ಲಿ ಶುದ್ಧ ಬಿಸಿ ನೀರಿನ ವ್ಯವಸ್ಥೆ ಮಾಡುವಂತೆಯೂ ಸರ್ಕಾರ ತನ್ನ ಮಾರ್ಗಸೂಚಿಯಲ್ಲಿ ಹೇಳಿದೆ.