• Slide
    Slide
    Slide
    previous arrow
    next arrow
  • ಕೇಂದ್ರ ಸಚಿವರೊಡನೆ ಗಣ್ಯರ ಸಂವಾದ; ಐಟಿ ಪಾರ್ಕ್ ಸ್ಥಾಪನೆ, ಸಹಕಾರಿ ಸಂಸ್ಥೆಗೆ ತೆರಿಗೆ ವಿನಾಯಿತಿ ಆಗ್ರಹ

    300x250 AD

    ಶಿರಸಿ: ಉತ್ತರ ಕನ್ನಡವನ್ನು ಡಿಜಿಟಲ್ ಜಿಲ್ಲೆಯನ್ನಾಗಿ ಮಾಡಲು ಅವಶ್ಯಕವಾಗಿರುವ ಎಲ್ಲ ಮೂಲಭೂತ ಸೌಕರ್ಯವನ್ನು ತಮ್ಮ ಇಲಾಖೆಯಿಂದ ಪ್ರಯತ್ನಿಸುವುದಾಗಿ ಕೇಂದ್ರ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ, ವಿದ್ಯುನ್ಮಾನ ಮತ್ತು  ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.

    ಅವರು ಸೋಮವಾರ ಭಾರತೀಯ ಜನತಾ ಪಕ್ಷ ನಗರದ ಪೂಗ ಭವನದಲ್ಲಿ ಆಯೋಜಿಸಿದ್ದ ವಿವಿಧ ಕ್ಷೇತ್ರಗಳ ಗಣ್ಯರೊಂದಿಗಿನ ಸಂವಾದದಲ್ಲಿ ಮಾತನಾಡಿದರು. ಕೊವಿಡ್ ಕಾರಣಕ್ಕೆ ಬಹುತೇಕ ಐಟಿ ಕಂಪನಿಗಳಲ್ಲಿ ವರ್ಕ್ ಪ್ರಾಮ್ ಹೋಮ್ ಕಾನ್ಸೆಪ್ಟ್ ಜಾರಿಯಾಗಿದೆ. ಈ ನಿಟ್ಟಿನಲ್ಲಿ ಅದಕ್ಕೆ ಪೂರಕವಾಗಿರುವ ಹೈ ಸ್ಪೀಡ್ ಇಂಟರ್ ನೆಟ್ ಹಾಗು ಅವಶ್ಯಕ ಸೌಕರ್ಯವನ್ನು ಸಾಧ್ಯವಾದಷ್ಟು ಬೇಗನೇ ಒದಗಿಸಿಕೊಡುವುದಾಗಿ ಹೇಳಿದರು.

    ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಮಾತನಾಡಿ, ಜಿಲ್ಲೆಯ ವಿದ್ಯಾವಂತರಿಗೆ ಉದ್ಯೋಗ ಲಭಿಸಬೇಕು. ಉತ್ತರ ಕನ್ನಡದ್ದು ಸದಾ ಕೊಡುವ ಕೈಯ್ಯಾಗಿದೆ. ಆ ಕಾರಣಕ್ಕಾದರೂ ಅಭಿವೃದ್ಧಿಯ ಬಾಗಿಲು ಇಲ್ಲಿ ತೆರೆಯಬೇಕು ಎಂದರು.

    ಹಿರಿಯ ಲೆಕ್ಕಪರಿಶೋಧಕ ಎಸ್ ಜಿ ಹೆಗಡೆ ಬೆದೆಹಕ್ಲು ಮಾತನಾಡಿ, ಜಿಲ್ಲೆಯಲ್ಲಿ ಪ್ರತಿಭೆಗಳು ಹೊರ ಊರಿನ ಪಾಲಾಗುತ್ತಿದೆ. ವಿದ್ಯಾವಂತರು ಪಟ್ಟಣದೆಡೆಗೆ ಮುಖಮಾಡಿ ದಶಕಗಳೇ ಸಾಗಿವೆ. ಕೊವಿಡ್ ನಿಂದ ವರ್ಕ್ ಪ್ರಾಮ್ ಹೋಮ್ ಕಾರಣಕ್ಕೆ ಮತ್ತೆ ಜಿಲ್ಲೆಯೆಡೆಗೆ ಆಗಮಿಸಿರುವವರನ್ನು ಇಲ್ಲಿಯೇ ಉಳಿಸಿಕೊಳ್ಳಲು ಜಿಲ್ಲೆಗೊಂದು ಐಟಿ ಪಾರ್ಕ್ ಅವಶ್ಯಕತೆಯಿದೆ. ಅದಕ್ಕೆ ಬೇಕಾಗಿರುವ ಮೂಲಭೂತ ಸೌಕರ್ಯವನ್ನು ಸರಕಾರ ಒದಗಿಸಬೇಕು ಎಂದರು.

    300x250 AD

    ಟಿಎಸ್ಎಸ್ ಮುಖ್ಯ ಕಾರ್ಯನಿರ್ವಾಹಕ ರವೀಶ ಹೆಗಡೆ ಮಾತನಾಡಿ, ಸಹಕಾರಿ ಸಂಸ್ಥೆಗಳಿಗೆ ಇನ್ ಕಮ್ ಟ್ಯಾಕ್ಸ್ ಹಾಗು ಜಿಎಸ್ಟಿಗಳದ್ದೇ ಸಮಸ್ಯೆಯಾಗಿದೆ. ಸಹಕಾರಿ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗಳಿಗೆ ತೆರಿಗೆ ವಿನಾಯಿತಿ ಹೆಚ್ಚಿಸಬೇಕೆಂದು ಆಗ್ರಹಿಸಿದರು. ಭೈರುಂಬೆ ಸೇವಾ ಸಹಕಾರಿ ಸಂಘರ ಸಿಇಓ ಜಿ ಎಮ್ ಹೆಗಡೆ, ಪ್ರೈಮರಿ ಕೋ ಆಪರೇಟಿವ್ ಸೊಸೈಟಿಗಳಿಗೆ ಇನ್ ಕಮ್ ಟ್ಯಾಕ್ಸ್ ಹಾಗು ಜಿಎಸ್ಟಿಯದು ಬಹಳ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ವಾರ್ಷಿಕವಾಗಿ ಸಂಸ್ಥೆಗಳು ಪಡೆದ ಲಾಭಕ್ಕಿಂತ ಹೆಚ್ಚಿಗೆ ತೆರಿಗೆಯನ್ನು ತುಂಬುವ ಪ್ರಸಂಗಗಳು ಎದುರಾಗಿದೆ. ಇದಕ್ಕೊಂದು ಪರ್ಯಾಯ ವ್ಯವಸ್ಥೆಯನ್ನು ರೂಪಿಸುವಂತೆ ಮನವಿ ಮಾಡಿದರು.

    ಡಾ. ದಿನೇಶ ಹೆಗಡೆ, ಡಾ. ಜಿ.ಜಿ. ಹೆಗಡೆ ಕುಮಟಾ‌ಸೇರಿದಂತೆ ಅನೇಕರು ಜಿಲ್ಲೆಯ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತರುವುದರ ಜೊತೆಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

    ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಸೇರಿದಂತೆ ಇನ್ನಿತರರು ಇದ್ದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಕ್ಷೇತ್ರದ ಅನೇಕ ಗಣ್ಯರು ಭಾಗಿಯಾಗಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top