ಕುಮಟಾ: ತನ್ನ ನಿಸ್ವಾರ್ಥ ಸೇವೆಯ ಮೂಲಕ ಸಮಾಜದಲ್ಲಿ ಗುರುತಿಸಲ್ಪಟ್ಟು ಹಳ್ಳಿಗರ ಮನೆಮಾತಾಗಿರುವ ಗಿಡ್ಡಜ್ಜಿ ಮಕ್ಕಳ ಪಾಲಿನ ದೇವರೆಂದರೆ ತಪ್ಪಾಗಲಾರದು.
ತಾಲೂಕಿನ ಮೂರೂರು ಮುಸುಗುಪ್ಪಾದ ಗಿಡ್ಡಜ್ಜಿ ಗೌಡ ತಮ್ಮ 70 ರ ಇಳಿ ವಯಸ್ಸಿನಲ್ಲೂ ನಿಸ್ವಾರ್ಥ ಸೇವೆಯನ್ನು ಮುಂದುವರೆಸಿದ್ದಾರೆ. ಈಗಲೂ ಸಂದಿವಾತ, ತಲೆನೋವು, ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ಮನೆ ಮದ್ದು ಮಾಡಿಕೊಡುತ್ತಾರೆ. ಯಾವುದೇ ಫಲಾಪೇಕ್ಷೆಗಳಿಲ್ಲದೇ ಕಂದಮ್ಮಗಳ ಆರೈಕೆ, ದೃಷ್ಟಿ ದೋಷ ನಿವಾರಣೆ, ಹುಟ್ಟಿದ ಮಗುವಿಗಾಗುವ ತಲೆಯ ಕಣ್ಣಿ ಸಮಸ್ಯೆ ಸೇರಿದಂತೆ ಇತರೇ ಅನೇಕ ಸಮಸ್ಯೆಗಳಿಗೆ ಇವರೇ ಮನೆ ವೈದ್ಯೆ.
ಯುವಕ, ಯುವತಿಯರು, ನವಜೋಡಿ, ಗರ್ಭಿಣಿ ಸ್ತ್ರೀಯರು, ಬಾಳಂತಿಯರು, ಚಿಕ್ಕ ಮಕ್ಕಳ ಮೇಲೆ ಬಿದ್ದ ದೃಷ್ಟಿ ನಿವಾರಣೆಯನ್ನು ಹತ್ತಾರು ವರ್ಷಗಳಿಂದ ಮಾಡುತ್ತ ಬಂದಿದ್ದಾರೆ. ಹುಟ್ಟಿದ ಮಗುವನ್ನು ಆರೈಕೆ ಮಾಡುವ ಇವರು ಯಾರಾದರೂ ಕರೆದರೆ ಅವರ ಮನೆಗೆ ತೆರಳಿ ಪ್ರತಿದಿನ ತಮ್ಮ ಸೇವೆ ನೀಡುತ್ತಾರೆ. ಅಷ್ಟೇ ಅಲ್ಲದೇ, ಮದುವೆ, ಗೃಹಪ್ರವೇಶ ಇಂತಹ ಕಾರ್ಯಕ್ರಮಗಳಲ್ಲಿ ಜಾನಪದ ಹಾಡುಗಳನ್ನು ಹಾಡುವುದು ಹಾಗೂ ಹುಟ್ಟಿದ ಎಳೆ ಕಂದಮ್ಮಗಳಿಗೆ ಜೋಗುಳ ಹಾಡುವುದು ಬಲು ಇಷ್ಟ ಇವರಿಗೆ. ಊರಿನಲ್ಲಿ ಯಾವುದೇ ಮನೆಯಲ್ಲಿ ಮಗುವಿನ ಜನನವಾದಲ್ಲಿ ಅಲ್ಲಿ ಆರೈಕೆಗೆ ಮೊದಲು ತೆರಳುವವರೇ ಇವರು.
ಇವರ ಈ ಸಮಾಜ ಸೇವೆಗೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ