ಕುಮಟಾ: ಸರಿಯಾದ ಸೂರಿಲ್ಲದೇ ಅತಂತ್ರರಾಗಿದ್ದ ಅಸಾಹಯಕ ಕುಟುಂಬಕ್ಕೆ ಸೂರನ್ನು ಕಲ್ಪಿಸಿಕೊಟ್ಟು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಆಚರಿಸಿಕೊಂಡ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣ ಸಂಘಟನೆ.
ತಾಲೂಕಿನ ಅಳಕೋಡ ಗ್ರಾ.ಪಂ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ, ಅನಾರೋಗ್ಯದಿಂದ ಬಳಲುತ್ತಿರುವ ಕಡು ಬಡ ಕುಟುಂಬವೊಂದಕ್ಕೆ ಸೂರು ಹಾಗೂ ಅಗತ್ಯ ಆಹಾರ ಸಾಮಗ್ರಿಗಳನ್ನು ಕರವೇ ವತಿಯಿಂದ ಒದಗಿಸಲಾಯಿತು. ಬಡ ಕುಟುಂಬದ ಸಾವಿತ್ರಿ ನಾಯರ ಅವರ ಮನೆ ಹಾಳಾಗಿದ್ದು, ಮಳೆ ಬಂದರೆ ಮನೆಯ ಮೇಲ್ಛಾವಣಿಯಿಂದ ನೀರು ಸೋರುತ್ತಿತ್ತು. ಇದರಿಂದಾಗಿ ಮನೆಯಲ್ಲಿ ಉಳಿದುಕೊಳ್ಳಲು, ಅಡುಗೆ ಮಾಡಲೂ ಸಹ ಕಷ್ಟವಾಗುತ್ತಿತ್ತು. ಜೊತೆಗೆ ಸಾವಿತ್ರಿಯವರಿಗೆ ಓರ್ವ ಮಗ ಹಾಗೂ ಮಗಳಿದ್ದು, ಇಬ್ಬರೂ ಮಾನಸಿಕ ಅಸ್ವಸ್ಥರು ಹಾಗೂ ಅಂಗವಿಕಲರೂ ಕೂಡ. ಮನೆಯ ನಿರ್ವಹಣೆ, ಮಕ್ಕಳ ಆರೋಗ್ಯ, ತನ್ನ ಆರೋಗ್ಯ ನೋಡಿಕೊಳ್ಳಲೂ ಸರಿಯಾದ ದುಡಿಮೆ ಕೂಡ ಇಲ್ಲದರೆ ಸಾವಿತ್ರಿ ಕಂಗಾಲಾಗಿದ್ದರು.
ಈ ಬಗ್ಗೆ ಮನಗಂಡ ಕರವೇ ಸ್ವಾಭಿಮಾನಿ ಬಣದ ಕತಗಾಲ ಘಟಕಾಧ್ಯಕ್ಷ ಮಾರುತಿ ಆನೇಗುಂಡಿ ಸಮಸ್ಯೆ ಪರಿಹರಿಸುವ ಬಗ್ಗೆ ಜಿಲ್ಲಾಧ್ಯಕ್ಷ ರಾಜು ಮಾಸ್ತಿಹಳ್ಳ ಅವರ ಬಳಿ ವಿನಂತಿಸಿದ್ದರು. ತಕ್ಷಣ ಸಂಘಟನೆಯ ಸದಸ್ಯರೆಲ್ಲ ಜತೆಗೂಡಿ ಸಮರ್ಪಕ ಮನೆ ನಿರ್ಮಾಣದ ಜವಾಬ್ದಾರಿ ಹೊತ್ತು, ಅಗಸ್ಟ್ 15 ರಂದು ಸಾಂಕೇತಿಕವಾಗಿ ಮನೆಯ ಮೇಲ್ಛಾವಣಿಯನ್ನು ಸಂಪೂರ್ಣವಾಗಿ ತೆಗೆದು, ಮುರಿದು ಬೀಳುವ ಸ್ಥಿತಿಯಲ್ಲಿರುವ ಕಟ್ಟಿಗೆಗಳನ್ನು ತೆಗೆದು ರಾಡ್‍ಗಳನ್ನು ಬಳಸಿ, ಮೇಲ್ಛಾವಣಿ ಸರಿಪಡಿಸಿಕೊಟ್ಟಿದ್ದಾರೆ.
ಜೊತೆಗೆ ಪ್ರತಿನಿತ್ಯ ಬೇಕಾಗುವ ಅಗತ್ಯ ಸಾಮಗ್ರಿಗಳನ್ನು ನೀಡಿ, ಮುಂದಿನ ದಿನಗಳಲ್ಲಿ ಮನೆಯನ್ನು ಸಂಪೂರ್ಣವಾಗಿ ಸರಿಪಡಿಸಿಕೊಡುವ ಭರವಸೆ ನೀಡಿದ್ದಾರೆ. ಈ ವೇಳೆ ಸಂಘಟನೆಯ ಸದಸ್ಯರೆಲ್ಲ ಶ್ರಮದಾನ ಮಾಡಿ, ಮನೆ ದುರಸ್ಥಿಗೆ ಸಹಕರಿಸಿದ್ದರು.
ಕರವೇ ಜಿಲ್ಲಾಧ್ಯಕ್ಷ ರಾಜು ಮಾಸ್ತಿಹಳ್ಳ, ಕತಗಾಲ ಘಟಕಾಧ್ಯಕ್ಷ ಮಾರುತಿ ಅನೇಗುಂಡಿ, ಜಿಲ್ಲಾ ಕಾರ್ಯದರ್ಶಿ ಕೆ.ಎನ್ ಮಂಜು, ಕುಮಟಾ ತಾಲೂಕಾ ಉಪಾಧ್ಯಕ್ಷ ರಾಜೀವ ಗೌಡ, ಕಾರ್ಯದರ್ಶಿ ಹರೀಶ ಭಾರದ್ವಾಜ, ಪ್ರಾನ್ಸಿಸ್ ಫರ್ನಾಂಡೀಸ, ಈಶ್ವರ ಉಪ್ಪಾರ, ಪ್ರದೀಪ ನಾಯ್ಕ ಕತಗಾಲ, ಮಾಸ್ತಿ ಗೌಡ ಕೊಡಂಬಳೆ, ಭಾಸ್ಕರ ಗೌಡ ಮಾವಳ್ಳಿ, ಅಣ್ಣಪ್ಪ ಮುಕ್ರಿ, ಸತೀಶ, ಮಂಜುನಾಥ ಶೆಟ್ಟಿ, ಮಹೇಂದ್ರ ನಾಯ್ಕ ಬೆಳ್ಳಂಗಿ, ವಿನಾಯಕ ನಾಯ್ಕ ಮಿರ್ಜಾನ, ಸಚಿನ ಶೆಟ್ಟಿ, ಮಾರುತಿ ನಾಯ್ಕ ಹರೀಟಾ, ಅಜೀತ ಮುಕ್ರಿ, ಗಣೇಶ ಉಪ್ಪಾರ, ಸುಹಾನ ಭಂಡಾರಿ, ಚೇತು ಉಪ್ಪಾರ, ಅಕ್ಷಯ ಉಪ್ಪಾರ, ಯುವರಾಜ ಉಪ್ಪಾರ, ಅಭಿಲಾಸ ಉಪ್ಪಾರ ಇದ್ದರು.