Slide
Slide
Slide
previous arrow
next arrow

ಕ್ರಾಂತಿಕಾರಿ ‘ಮದನಲಾಲ ಧಿಂಗ್ರಾ’ ಬಲಿದಾನದ ನಿಮಿತ್ತ ವಿಶೇಷ ಲೇಖನ

300x250 AD

ಮದನಲಾಲ ಧಿಂಗ್ರಾರವರು ೧೮೮೭ರಲ್ಲಿ ಆಗಿನ ’ಬ್ರಿಟೀಷ ಭಾರತ’ದ ಪಂಜಾಬ ಪ್ರಾಂತ್ಯದಲ್ಲಿದ್ದ ಅಮೃತಸರದಲ್ಲಿ ಜನಿಸಿದರು. ಅನುಕೂಲಕರವಾದ ಹಿಂದೂ ಕುಟುಂಬದಲ್ಲಿ ಜನಿಸಿದ ಧಿಂಗ್ರಾರವರ ತಂದೆಯವರಾದ ಸಾಹಿಬ್ ದಿತ್ತಾ ಮಾಲ್ ರವರು ಗುರುದಾಸಪುರ ಮತ್ತು ಹಿಸ್ಸಾರ ಸರ್ಕಾರಿ (ದಿವಾನ್ ಆಡಳಿತ) ಆಸ್ಪತ್ರೆಯಲ್ಲಿ ವೈದ್ಯರಾಗಿದ್ದರು. ಬ್ರಿಟೀಷರ ಕುರಿತು ಸ್ವಾಮಿನಿಷ್ಠೆಯುಳ್ಳವರಾಗಿದ್ದ ಧಿಂಗ್ರಾರವರ ತಂದೆಯವರಿಗೆ ’ರಾಯ್ ಸಾಹೇಬ್’ ಎಂಬ ಬಿರುದನ್ನು ಇದೇ ಕಾರಣದಿಂದ ಬ್ರಿಟೀಷರು ಕೊಟ್ಟು ಸನ್ಮಾನಿಸಿದ್ದರು. ಈ ರೀತಿಯ ವಾತಾವರಣದಲ್ಲಿ ಹುಟ್ಟಿದ್ದರೂ, ಭೋಗ ಜೀವನವನ್ನು ಅನುಭವಿಸುವ ಬದಲು ಧಿಂಗ್ರಾರವರು ಬ್ರಿಟೀಷರ ವಿರುದ್ಧ ಸಿಡಿದೆದ್ದು, ತಮ್ಮ ಪ್ರಾಣವನ್ನು ದೇಶಕ್ಕಾಗಿ ಮುಡಿಪಾಗಿಟ್ಟು ಮಹಾತ್ಮರೆನಿಸಿದರು.

ಧಿಂಗ್ರಾರವರು ಲಾಹೋರಿನ ಕಾಲೇಜಿನಲ್ಲಿ ಓದುತ್ತಿರುವಾಗಲೇ, ಸ್ವಾತಂತ್ರ್ಯಕ್ಕಾಗಿ ಹೋರಾಡುವಂತೆ ತಮ್ಮ ಸಹಪಾಠಿಗಳನ್ನು ಪ್ರೋತ್ಸಾಹಿಸುತ್ತಿದ್ದರು. ಈ ಹೋರಾಟಕ್ಕಾಗಿ ಸಂಘವನ್ನು ಕಟ್ಟುವ ಕೆಲಸಕ್ಕೆ ಹೋದಾಗ, ’ಬಿಟೀಷರ ವಿರುದ್ಧದ ಚಟುವಟಿಕೆಗಳಲ್ಲಿ ತೊಡಗಿರುವ’ ಆರೋಪದ ಮೇಲೆ ಕಾಲೇಜಿನಿಂದ ಹೊರಹಾಕಲ್ಪಟ್ಟರು. ಬ್ರಿಟೀಷರ ಪರವಾಗಿದ್ದ ಕುಟುಂಬದಿಂದಲೂ ಕೆಲಕಾಲ ದೂರವಾಗಿದ್ದ ಇವರು, ಆ ಸಂದರ್ಭದಲ್ಲಿ ಗುಮಾಸ್ತರಾಗಿ, ಕಾರ್ಮಿಕರಾಗಿ ಮತ್ತು ರಿಕ್ಷಾ ತಳ್ಳುವ ಕೆಲಸವನ್ನು ಮಾಡಬೇಕಾಯಿತು. ಮುಂಬೈನಲ್ಲಿ ಕೂಡ ಕೆಲಕಾಲ ಕೆಲಸ ಮಾಡಿದ ಇವರು, ತಮ್ಮ ಅಣ್ಣನರ ಸಲಹೆಯಂತೆ ಉನ್ನತ ಶಿಕ್ಷಣವನ್ನು ಪಡೆಯಲು ವಿದೇಶಕ್ಕೆ ತೆರಳಲು ಸಿದ್ಧರಾದರು. ೧೯೦೬ರಲ್ಲಿ ಇವರು ’ಮೆಕ್ಯಾನಿಕಲ್ ಇಂಜಿನಿಯರ್’ ಪದವಿಯನ್ನು ಪಡೆಯಲು ಲಂಡನ್ನಿನ ’ಯೂನಿವರ್ಸಿಟಿ ಕಾಲೇಜಿ’ಗೆ ಸೇರಿದರು.

ತಮ್ಮ ೧೯ನೇ ವಯಸ್ಸಿನಲ್ಲಿ ಭಾರತವನ್ನು ಬಿಟ್ಟು, ಇವರು ದ್ವೇಶಿಸುತ್ತಿದ್ದ ಬ್ರಿಟೀಷರ ಜನ್ಮಸ್ಥಳ ಲಂಡನ್ನಿಗೆ ಬಂದ ಧಿಂಗ್ರಾರವರಿಗೆ ಮತ್ತೆ ಭಾರತವನ್ನು ನೋಡುವ ಭಾಗ್ಯ ಸಿಗಲೇ ಇಲ್ಲ. ಅಲ್ಲಿದ್ದ ಕೆಲವು ದೇಶಭಕ್ತರ ಪರಿಚಯವಾದದ್ದು ಇವರಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವ ಆಸೆಗೆ ಪುಷ್ಟಿ ಸಿಕ್ಕ ಹಾಗಾಯಿತು. ಇವರಿಗೆ ಅಲ್ಲಿ ಪರಿಚಯವಾದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಪ್ರಮುಖವಾದವರು ವಿನಾಯಕ ದಾಮೋದರ ಸಾವರ್ಕರ ಮತ್ತು ಶ್ಯಾಮ್ ಜೀ ಕೃಷ್ಣವರ್ಮ. ಧಿಂಗ್ರಾರ ನಿಷ್ಠೆ ಮತ್ತು ಗಾಢ ದೇಶಪ್ರೇಮವನ್ನು ಗಮನಿಸಿದ ಇವರುಗಳು ಧಿಂಗ್ರಾರ ಗಮನವನ್ನು ಸ್ವಾತಂತ್ರ್ಯ ಹೋರಾಟದ ಕಡೆಗೆ ಹರಿಸುವ ಹಾಗೆ ಮಾಡಿದರು. ಸಾವರ್ಕರವರು ಲಂಡನ್ನಿನಲ್ಲಿದ್ದ ’ಅಭಿನವ ಭಾರತ ಮಂಡಲ’ದ ಸದಸ್ಯರಾಗಲು ಧಿಂಗ್ರಾರವರಿಗೆ ಸಹಾಯ ಮಾಡಿದರು.

’ಇಂಡಿಯನ್ ನ್ಯಾಷನಲ್ ಅಸೋಸಿಯೇಷನ್’ನಲ್ಲಿ ನಡೆಯುತ್ತಿದ್ದ ವಾರ್ಷಿಕೋತ್ಸವ ಸಮಾರಂಭದಲ್ಲಿ ಹಲವಾರು ಭಾರತೀಯ ಮತ್ತು ಇಂಗ್ಲೀಷ ಪ್ರಜೆಗಳು ನೆರೆದಿದ್ದರು. ಜನರನ್ನು ರಂಜಿಸಲೆಂದು ಆಯೋಜಿಸಲಾಗಿದ್ದ ಸಂಗೀತ ಸಭೆಯು ಮುಗಿದ ನಂತರ, ಹೆಂಡತಿಯೊಂದಿಗೆ ಸಭೆಗೆ ಆಗಮಿಸಿದ ವೈಲ್ಲಿಯವರನ್ನು ಆದರದಿಂದ ಸ್ವಾಗತಿಸಿದ ಧಿಂಗ್ರಾರವರು, ನೆರೆದಿದ್ದ ಜನರೆದುರಿಗೇ ತಕ್ಷಣವೇ ೫ ಗುಂಡುಗಳನ್ನು ವೈಲ್ಲೀ ಅವರ ಮುಖಕ್ಕೆ ನೇರವಾಗಿ ಹಾರಿಸಿದರು. ವೈಲ್ಲಿಯವರನ್ನು ರಕ್ಷಿಸಲು ಮುಂದಾದ ಪಾರ್ಸೀ ವೈದ್ಯರಾದ ಕೌಆಸ್ಜೀ ಲಾಲ್ಕಾಕಾರವರು ಧಿಂಗ್ರಾರನ್ನು ಹಿಡಿಯಲು ಮುಂದಾದಾಗ, ತಮ್ಮ ಸ್ವರಕ್ಷಣೆಗೋಸ್ಕರ ಮತ್ತೆರಡು ಗುಂಡುಗಳನ್ನು ಧಿಂಗ್ರಾರವರು ಹಾರಿಸಲೇಬೇಕಾಯಿತು. ಯಾವುದೇ ಅಂಜಿಕೆಯಿಲ್ಲದೇ ಬ್ರಿಟೀಷರಿಗೆ ಶರಣಾದ ಧಿಂಗ್ರಾರವರು ನ್ಯಾಯಲಯದಲ್ಲಿ ಲಾಲ್ಕಾಕಾರವರನ್ನು ಕೊಲ್ಲುವ ಯಾವುದೇ ಇರಾದೆ ಇರಲಿಲ್ಲ, ಅದು ಆಕಸ್ಮಿಕವಾಗಿ ನಡೆದಂತಹ ಘಟನೆ ಎಂದು ಹೇಳಿಕೆ ಕೊಟ್ಟರು. ಅವರು ಯಾವುದೇ ಅಳುಕಿಲ್ಲದೇ ವೈಲ್ಲೀಯವರನ್ನು ಕೊಂದ ವಿಚಾರದಲ್ಲಿ, “ಇದು ನಾನು ನನ್ನ ತಾಯ್ನಾಡನ್ನು ಉಳಿಸುವ ಸಲುವಾಗಿ ಮಾಡಿದ ಕೃತ್ಯ. ಜರ್ಮನ್ನರು ಇಂಗ್ಲೆಂಡನ್ನು ಅತಿಕ್ರಮಿಸಿಕೊಂಡಿದ್ದ ಪಕ್ಷದಲ್ಲಿ ಇಂಗ್ಲೀಷರು ಕೂಡ ನನ್ನ ಹಾಗೆಯೇ ಮಾಡುತ್ತಿದ್ದರು” ಎನ್ನುತ್ತಾ ತಮ್ಮ ಕಾರ್ಯವನ್ನು ಸಮರ್ಥಿಸಿಕೊಂಡರು.

ಈ ಘಟನೆಯ ಬಳಿಕ, ಧಿಂಗ್ರಾರು ಏಳು ದಿನಗಳ ಕಾಲ ಪೊಲೀಸರ ಸ್ವಾಧೀನದಲ್ಲಿದ್ದರು. ಈ ಸಮಯದಲ್ಲಿ ಜುಲೈ ೧೦ರಂದು ’ಓಲ್ಡ್ ಬೈಲೀ’ ನ್ಯಾಯಾಲಯದಲ್ಲಿ ನಡೆಯಲ್ಲುದ್ದೇಶಿಸಿದ್ದ ವಿಚಾರಣೆಗಾಗಿ ತಮ್ಮ ಭಾಷಣವನ್ನು ಸಿದ್ಧಪಡಿಸಿಕೊಳ್ಳುತ್ತಿದ್ದರು. ವಿಚಾರಣೆಯ ದಿನ ನ್ಯಾಯಾಧೀಶರ ಅಪೇಕ್ಷೆಯ ಮೇರೆಗೆ ಅವರು ಮಾಡಿದ ಭಾಷಣವು ಅವರ ಜೀವನದಲ್ಲೇ ಮರೆಯಲಾಗದಂತಹ ಅದ್ಭುತ ಘಟನೆಗಳಲ್ಲೊಂದು.

“ನಾನು ಈ ಭಾಷಣವನ್ನು ನಾನು ಮಾಡಿದ ಕಾರ್ಯವನ್ನು ಸಮರ್ಥಿಸಿಕೊಳ್ಳಲು ಮಾಡುತ್ತಿದ್ದೇನೆಯೇ ವಿನಹ ನನ್ನನ್ನು ಬಿಡುಗಡೆ ಮಾಡಿ ಎಂದು ಕೋರಲಲ್ಲ. ಯಾವುದೇ ಇಂಗ್ಲೀಷ ಕಾನೂನಿಗೂ ಕೂಡ ನನ್ನನ್ನು ಸೆರೆಹಿಡಿಯಲು ಅಥವಾ ಗಲ್ಲಿಗೇರಿಸಲು ಅಧಿಕಾರವಿಲ್ಲ. ಜರ್ಮನ್ನರು ಇಂಗ್ಲೆಂಡನ್ನು ಆಕ್ರಮಿಸಿಕೊಂಡರೆ, ಅದರ ವಿರುದ್ಧ ಹೋರಾಡುವ ಆಂಗ್ಲರಿಗೆ ಅದು ಹೇಗೆ ದೇಶಭಕ್ತಿ ಕಾರ್ಯವೋ, ಹಾಗೆಯೇ ನನ್ನ ತಾಯ್ನಾಡಿನ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಅದೇ ಆಂಗ್ಲರ ವಿರುದ್ಧ ಹೋರಾಡಿದ ನನ್ನ ಈ ಕಾರ್ಯವೂ ಕೂಡ ದೇಶಭಕ್ತಿಯ ಕಾರ್ಯ ಮತ್ತು ಸಮರ್ಥನೀಯವಾದಂತಹ ಕಾರ್ಯ. ಕಳೆದ ೫೦ ವರ್ಷಗಳಲ್ಲಿ ೮೦ ಲಕ್ಷ ಭಾರತೀಯರನ್ನು ಕೊಲೆಗೈದ ಇದೇ ಆಂಗ್ಲರ ಕೃತ್ಯಗಳನ್ನು ನಾನು ಖಂಡಿಸುತ್ತೇನೆ. ಇದಲ್ಲದೇ, ನಮ್ಮ ದೇಶದಿಂದ ಪ್ರತೀ ವರ್ಷ ೧೦೦೦ ಲಕ್ಷ ಪೌಂಡಗಳಷ್ಟು ಬೆಲೆಬಾಳುವ ಸಂಪತ್ತನ್ನು ದೋಚಿ, ಅದನ್ನು ಅಲ್ಲಿಂದ ಇಲ್ಲಿಗೆ ಸಾಗಿಸುತ್ತುರುವ ಈ ಅಂಗ್ಲರ ದಬ್ಬಾಳಿಕೆಯ ವಿರುದ್ಧ, ನನ್ನ ತಾಯ್ನಾಡಿನ ರಕ್ಷಣೆಗಾಗಿ ಹೋರಾಡುತ್ತಿರುವ ನನ್ನನ್ನು ಶಿಕ್ಷಿಸುವ ಯಾವುದೇ ಅಧಿಕಾರ ಈ ಆಂಗ್ಲರಿಗಿಲ್ಲ” ಎಂದು ನ್ಯಾಯಾಧೀಶರ ಎದುರು ಹೆಮ್ಮೆಯಿಂದ ಹೇಳುತ್ತಾರೆ.

300x250 AD

ಜುಲೈ ೨೩, ೧೯೦೯ರಂದು ’ಓಲ್ಡ್ ಬೈಲೀ’ ನ್ಯಾಯಾಲಯದಲ್ಲಿ ನಡೆದ ಕೊನೆಯ ವಿಚಾರಣೆಯ ಸಂದರ್ಭದಲ್ಲಿ, ಧಿಂಗ್ರಾರನ್ನು ಗಲ್ಲಿಗೇರಿಸುವ ನಿರ್ಧಾರವನ್ನು ಕೇವಲ ೨೦ ನಿಮಿಷಗಳೊಳಗೆ ತೆಗೆದುಕೊಂಡ ನ್ಯಾಯಾಧೀಶರು, ಆಗಸ್ಟ ೧೭, ೧೯೦೯ ರಂದು ಧಿಂಗ್ರಾರನ್ನು ಗಲ್ಲಿಗೇರಿಸಬೇಕೆಂದು ಆದೇಶಿಸುತ್ತಾರೆ. ನೇಣು ಹಗ್ಗವನ್ನು ಚುಂಬಿಸುತ್ತ ತಾಯ್ನಾಡಿಗಾಗಿ ತನ್ನ ಪ್ರಾಣವನ್ನು ತ್ಯಜಿಸುವ ಸಂದರ್ಭದಲ್ಲಿ ಧಿಂಗ್ರಾರವರು ಆಡಿದ ಕೊನೆಯ ಮಾತುಗಳು – ” ಅಮ್ಮ, ನಿನ್ನ ಕೆಲಸವೆಂದರೆ, ಪ್ರಭು ಶ್ರೀರಾಮನ ಕೆಲಸ. ನಿನಗೆ ಅವಮಾನವಾದರೆ ನನ್ನ ದೇವರಿಗೆ ಮಾಡಿದ ಅವಮಾನ. ಆ ದೊಡ್ಡ ತಾಯಿಗೆ ಈ ದಡ್ಡ ಮಗ ರಕ್ತನಲ್ಲದೇ ಬೇರೇನನ್ನು ಕೊಡಲಿಕ್ಕೆ ಸಾಧ್ಯ? ಇದೇ ಭಾರತಾಂಬೆಯ ಮಡಿಲಲ್ಲಿ ಮತ್ತೊಮ್ಮೆ ಹುಟ್ಟಿ, ಯಾವ ಕಾರ್ಯಕ್ಕಾಗಿ ನಾನು ಈಗ ಮಡಿಯುತ್ತಿದ್ದೇನೋ, ಆ ಪವಿತ್ರ ಕಾರ್ಯವು ಯಶಸ್ವಿಯಾಗುವ ತನಕ ನನ್ನ ಜೀವವನ್ನು ಅದೇ ಕಾರ್ಯದ ಯಶಸ್ಸಿಗಾಗಿ ಮುಡುಪಾಗಿಡುವಂತೆ ಮಾಡೆಂದು ನನ್ನ ದೇವರಲ್ಲಿ ವಿನಂತಿಸಿಕೊಳ್ಳುತ್ತೇನೆ. ವಂದೇ ಮಾತರಂ ! “.

ಧಿಂಗ್ರಾರ ಈ ವೀರ ಮರಣಗಾಥೆಯನ್ನು ಐರಿಶ್ ಪ್ರೆಸ್ ಮತ್ತು ಇನ್ನು ಹಲವು ಪತ್ರಿಕೆಗಳು ಪ್ರಕಟಿಸಿದವು. ತಮ್ಮ ತಮ್ಮ ಪತ್ರಿಕೆಗಳಲ್ಲಿ ಧಿಂಗ್ರಾರನ್ನು ಮಹಾನ ನಾಯಕರೆಂದು ಬಣ್ಣಿಸಿದವು. ಇದನ್ನು ಓದಿದ ’ವಿನ್ ಸ್ಟೀನ್ ಚರ್ಚಿಲ್’ರು, “ಧಿಂಗ್ರಾರಂತಹ ನಾಯಕರನ್ನು ನಮ್ಮ ಮುಂದಿನ ಪೀಳಿಗೆಯವರು ಮರೆಯಬಾರದು. ಅವರಂತೆ ದೇಶಕ್ಕಾಗಿ ದುಡಿಯುವಂತವರಾಗಿರಬೇಕು” ಎಂದರು. ಇವರ ಹೆಸರಿನಲ್ಲಿ ’ಮದನ ತಲ್ವಾರ’ ಎಂಬ ಪತ್ರಿಕೆಯನ್ನು ವೀರೆಂದ್ರನಾಥ ಚಟ್ಟೋಪಾಧ್ಯಾಯರು ಶುರುಮಾಡಿದರು. ಈ ಪತ್ರಿಕೆಯು ವಿದೇಶದಲ್ಲಿ ಎಲ್ಲರ ಮನೆಮಾತಾಯಿತು.

ಕೊನೆಯಲ್ಲಿ, ನಮ್ಮ ಶಾಲಾ ದಿನಗಳಲ್ಲಿ ನಾವು ಓದಿದ ಇತಿಹಾಸ ಪುಸ್ತಕಗಳನ್ನು ಮತ್ತೊಮ್ಮೆ ತಿರುವು ಹಾಕಿದರೆ, ನಮಗೆ ಯಾವ ಪುಟದಲ್ಲಿ ಕೂಡ ’ಮದಲಲಾಲ ಧಿಂಗ್ರಾ’ನೆಂಬ ಮಹಾನ್ ಪುರುಷನ ಹೆಸರು ಕಾಣಸಿಗುವುದಿಲ್ಲ. ದೇಶಕ್ಕಾಗಿ ಎಳ್ಳಷ್ಟು ಸೇವೆ ಮಾಡದೇ, ನಮ್ಮ ದೇಶವನ್ನು ಲೂಟಿ ಮಾಡಿದ ಮುಸಲ್ಮಾನ ರಾಜರುಗಳನ್ನು ಮತ್ತು ಈಗಲೂ ಲೂಟಿ ಮಾಡುತ್ತಿರುವ ಕಪಟ ಗಾಂಧೀವಾದಿ ಹೋರಾಟಗಾರರನ್ನು ನೆನೆಯುವುದನ್ನು ಬಿಟ್ಟು, ನಾವು ಸ್ವತಂತ್ರರಾಗಲು ನೆರವಾದ ಹಲವು ಮಹಾನ್ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬರಾದ ಧಿಂಗ್ರಾರ ಹೋರಾಟವನ್ನು ಸದಾಕಾಲ ಸ್ಮರಿಸುವಂತಾಗಬೇಕು.

-ಸಂಕಲನ: ಶರತ್ ಕುಮಾರ ನಾಯ್ಕ

Share This
300x250 AD
300x250 AD
300x250 AD
Back to top