ಯಲ್ಲಾಪುರ: ತಾಲೂಕಿನ ತಟಗಾರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಚಾರಕ್ಕೆ ಯೋಗ್ಯವಾಗಿಲ್ಲ. ರಸ್ತೆ ದುರಸ್ಥಿಯ ಬಗ್ಗೆ ಸಾಕಷ್ಟು ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಅಸಮಧಾನ ವ್ಯಕ್ತಪಡಿಸಿದ್ದಾರೆ. ಸೂಕ್ತ ರಸ್ತೆ ವ್ಯವಸ್ಥೆ ಇಲ್ಲದ ಕಾರಣ ತಟಗಾರ ಮುಸ್ಲಿಂ ಕೇರಿ, ಕಳ್ಳರಮನೆ, ಸಾತುಗದ್ದೆ ಮೊದಲಾದ ಭಾಗಗಳಿಗೆ ತೆರಳಲು ತೊಂದರೆಯಾಗುತ್ತಿದೆ. ರಸ್ತೆ ದುರಸ್ಥಿಗಾಗಿ ಜನ ವಾರ್ಡ ಸಭೆ ಹಾಗೂ ಗ್ರಾಮ ಸಭೆಗಳಲ್ಲಿಯೂ ಧ್ವನಿ ಎತ್ತಿದ್ದಾರೆ. ಆದರೆ, ಯಾವುದೇ ಪ್ರಯೋಜನ ಆಗಿಲ್ಲ. ಬದಲಾಗಿ ಮಳೆ ಬಿದ್ದ ನಂತರ ಭಾರೀ ಪ್ರಮಾಣದ ವಾಹನಗಳ ಓಡಾಟದ ಕಾರಣದಿಂದ ರಸ್ತೆ ಇನ್ನಷ್ಟು ಹಾಳಾಗಿದೆ ಎಂದು ಊರಿನವರು ದೂರಿದ್ದಾರೆ.
ಈ ರಸ್ತೆ ಮೂಲಕ ನಿತ್ಯ ನೂರಾರು ಜನ ಓಡಾಡುತ್ತಾರೆ. ಅನೇಕ ಜನಪ್ರತಿನಿಧಿಗಳು ಸಹ ಇದೇ ಮಾರ್ಗವನ್ನು ಅವಲಂಭಿಸಿದ್ದಾರೆ. ಆದರೂ, ರಸ್ತೆ ದುರಸ್ಥಿ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಗ್ರಾಮಸ್ಥರಾದ ನರಸಿಂಹ ಹೆಗಡೆ ಸಾತುಗದ್ದೆ ಆಕ್ರೋಶ ವ್ಯಕ್ತಪಡಿಸಿದರು. ಸಾತುಗದ್ದೆ, ಕಳ್ಳರಮನೆ, ಮುಸ್ಲೀಂ ಕೇರಿ ಸೇರಿ 30ಕ್ಕೂ ಅಧಿಕ ಮನೆಯವರ ಓಡಾಟಕ್ಕೆ ಈ ರಸ್ತೆ ಬಿಟ್ಟು ಅನ್ಯ ಮಾರ್ಗವಿಲ್ಲ. ಅನಾರೋಗ್ಯ ಸೇರಿದಂತೆ ತುರ್ತು ಪರಿಸ್ಥಿತಿಯ ವೇಳೆ ಆಸ್ಪತ್ರೆಗೆ ತೆರಳಲು ಸಹ ತೊಂದರೆಯಾಗುತ್ತಿದೆ ಎಂದು ಅವರು ವಿವರಿಸಿದರು. ಪ್ರತಿ ವರ್ಷ ಮಳೆಗಾಲದಲ್ಲಿಯೂ ಜನ ರಸ್ತೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಕೂಡಲೇ ಈ ರಸ್ತೆ ದುರಸ್ಥಿ ಮಾಡಬೇಕು. ಇಲ್ಲವಾದಲ್ಲಿ ಇದೇ ರಸ್ತೆಯ ಮೇಲೆ ಭತ್ತ ನಾಟಿ ಮಾಡಿ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.