ಶಿರಸಿ: ತಾಲೂಕಿನ ಹನುಮಂತಿಯಲ್ಲಿರುವ ಧಾರವಾಡ ಹಾಲು ಒಕ್ಕೂಟದ ಶೀಥಲ ಕೇಂದ್ರದಲ್ಲಿ 75ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಧಾರವಾಡ ಹಾಲು ಒಕ್ಕೂಟ ಹಾಗು ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಧ್ವಜಾರೋಹಣ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ಈ ವರ್ಷದ ನಮ್ಮ ಸ್ವಾತಂತ್ರ್ಯೋತ್ಸವ ಅತ್ಯಂತ ವಿಶೇಷವಾಗಿದ್ದು, ನಮ್ಮ ದೇಶ ಸ್ವಾತಂತ್ರ್ಯ ಪಡೆದು 75 ವರ್ಷಗಳಾಗಿದೆ. ಈ ಗಳಿಗೆಯ ಮಹತ್ವವನ್ನು ಪ್ರತಿಯೊಬ್ಬ ನಾಗರೀಕನು ಅರಿತು ಅರ್ಥಪೂಣವಾಗಿ ಬದುಕಬೇಕಿದೆ ಎಂದರು.
ಈ ವರ್ಷದ ಸ್ವಾತಂತ್ರ್ಯೋತ್ಸವದ ಆಚರಣೆಯನ್ನು ವಿವಿಧ ರೀತಿಯಲ್ಲಿ ಆಚರಿಸುವಂತೆ ಸರ್ಕಾರ ಹೇಳಿದೆ. ಸೈಕಲ್ ಜಾತಾದ ಮೂಲಕ, ಗಿಡ ನೆಡುವ ಮೂಲಕ ಹಲವರು ಸ್ವಾತಂತ್ರ್ಯೋತ್ಸವವನ್ನು ಆಚರಣೆ ಮಾಡುತ್ತಿದ್ದಾರೆ. ಈಗಿನ ಪೀಳಿಗೆಯ ಮಕ್ಕಳಲ್ಲಿ ದೇಶದ ಕುರಿತು ಅಭಿಮಾನ, ದೇಶಭಕ್ತಿಯ ಭಾವನೆಯನ್ನು ನಾವು ಈಗಿನಂದಲೇ ಅವರಿಗೆ ಅರಿವು ಮೂಡಿಸಿ ನಾವೆಲ್ಲರೂ ಭಾರತೀಯರು ಎಂಬ ಭಾವನೆ ಬೇರೂರುವಂತೆ ನೋಡಿಕೊಳ್ಳಬೇಕಾಗಿದೆ ಎಂದರು.
ನಮ್ಮ ನೆಲದ ಪರಿಸರದಲ್ಲಿ ನಮ್ಮ ಸುತ್ತಮಮುತ್ತಲೂ ಒಂದು “ಓಂಕಾರ”ವಿದೆ. ಅದನ್ನು ನಾವು ಗ್ರಹಿಸಿ ನಮ್ಮಲ್ಲಿನ ಸಕಾರಾತ್ಮಕ ಭಾವನೆಯನ್ನು ಹೆಚ್ಚಿಸಿಕೊಂಡು ದೇಶಕ್ಕೆ ಪೂರಕವಾದ ಕೆಲಸಗಳನ್ನು ನಾವು ಮಾಡಬೇಕಿದೆ. ನಮ್ಮ ದೇಶಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಆ ಇತಿಹಾಸ ಇತರ ದೇಶಗಳ ಇತಿಹಾಸಕ್ಕಿಂತ ಮಾದರಿಯಾಗಿದೆ. ಅದರಂತೆಯೇ ನಾವುಗಳೂ ಸಹ ಉತ್ತಮ ಕೆಲಸಗಳನ್ನು ಮಾಡುವ ಮೂಲಕ ಇತರರಿಗೆ ಮಾದರಿಯಾಗಬೇಕಿದೆ ಎಂದರು.
ಇನ್ನು ಕೆಲವೇ ದಿನಗಳಲ್ಲಿ ಪ್ಯಾಕಿಂಗ್ ಘಟಕ ಕಾರ್ಯಾರಂಭ ಮಾಡುವ ದಿಶೆಯಲ್ಲಿದ್ದು, ಅದಕ್ಕಾಗಿ ನಾವು ಮುಂಬರುವ ದಿನಗಳಲ್ಲಿ ಎಲ್ಲರೂ ಒಟ್ಟುಗೂಡಿ ಕೆಲಸ ನಿರ್ವಹಿಸಿ ಉತ್ತಮ ಗುಣಮಟ್ಟದ ಹಾಲನ್ನು ಅಧಿಕ ರೂಪದಲ್ಲಿ ಸಂಗ್ರಹಣೆ ಮಾಡುವ ಮೂಲಕ ಜಿಲ್ಲೆಯ ಹಾಲು ಉತ್ಪಾದಕ ರೈತರ ಏಳಿಗೆಗೆ ಶ್ರಮಿಸಬೇಕಾಗಿದ್ದು, ಹಾಲು ಉತ್ಪಾದಕ ರೈತಪರಕೆಲಸಗಳನ್ನು ಇನ್ನಷ್ಟು ಉತ್ತಮ ರೀತಿಯಲ್ಲಿ ಮಾಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಮುಖ್ಯಸ್ಥರಾದ ಎಸ್ ಎಸ್ ಬಿಜೂರ್, ಶೀಥಲ ಕೇಂದ್ರದ ವ್ಯವಸ್ಥಾಪಕರಾದ ಕೃಷ್ಣ ಕೆಎನ್, ದೇವೇಂದ್ರ ಕುಮಾರ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.