ಯಲ್ಲಾಪುರ: ತಾಲೂಕಿನ ಹಿತ್ಲಳ್ಳಿ ಪಂಚಾಯತ ವ್ಯಾಪ್ತಿಯ ವಾಟೆಹಳ್ಳ ಅಂಗನವಾಡಿ ಕೇಂದ್ರದಲ್ಲಿ ವಿಧಾನ ಪರಿಷತ ಸದಸ್ಯ ಶಾಂತಾರಾಮ ಸಿದ್ದಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸ್ಥಳೀಯರೊಂದಿಗೆ ಆಚರಿಸಿದರು.
ಈ ವೇಳೆ ಮಾತನಾಡಿದ ಅವರು, ನಾವು ದೇಶಕ್ಕಾಗಿ ಹೋರಾಡಿದ ಕೆಲವೇ ಕೆಲವು ನಾಯಕರ ಹೆಸರುಗಳನ್ನು ಅನೇಕ ವರ್ಷಗಳಿಂದ ಕೇಳುತ್ತಾ ಬಂದಿದ್ದೇವೆ. ಆದರೆ ಅದೆಷ್ಟೊ ಮಹಾನ್ ನಾಯಕರುಗಳನ್ನು ನಾವು ಮರೆತಿದ್ದೇವೆ. ಅಂತಹ ಎಲ್ಲಾ ನಾಯಕರುಗಳನ್ನು ನೆನಪಿಸಿಕೊಳ್ಳುವ ಮಹಾನ ಕಾರ್ಯವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದರು.
ನಾವೆಲ್ಲರೂ ನಮ್ಮಮುಂದಿನ ಪೀಳಿಗೆಗೆ ಎಲ್ಲಾ ಮಹಾನಾಯಕರ ಬಗ್ಗೆ ಹೆಚ್ಚಿನ ರೀತಿಯಲ್ಲಿ ತಿಳಿಸಿ ಮಕ್ಕಳಲ್ಲಿ ದೇಶ ಭಕ್ತಿ ಹೆಚ್ಚಿಸುವ ಕಾರ್ಯವನ್ನು ಮಾಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ನೇತ್ರಾ ಗೌಡ, ಹಿರಿಯರಾದ ವೆಂಕಟ್ರಮಣ ನಾಯ್ಕ, ಗಣಪತಿ ಗೌಡ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ರಾಜೇಶ್ವರಿ ಕುಣಬಿ, ಊರಿನ ಪ್ರಮುಖರು ಉಪಸ್ಥಿತರಿದ್ದರು.