ಶಿರಸಿ: ಆ. 9 ಹಾಗೂ 10 ರಂದು ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ‘ಮೈಸೂರು ಲೀಗ್ ಬ್ಯಾಡ್ಮಿಂಟನ್ ಶಿಪ್’ನಲ್ಲಿ 17 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್ ವಿಭಾಗದಲ್ಲಿ ಪ್ರೇರಣಾ ನಂದಕುಮಾರ್ ಶೇಟ್ ಸ್ಪರ್ಧಿಸಿ ವಿಜೇತಳಾಗಿದ್ದಲ್ಲದೇ ‘ಬೆಸ್ಟ್ ಪ್ಲೇಯರ್’ ಪ್ರಶಸ್ತಿ ಪಡೆದು ಸಾಧನೆ ಮಾಡಿದ್ದಾಳೆ.
ನಗರದ ಲಯನ್ಸ್ ಶಾಲೆಯಲ್ಲಿ 10 ನೇ ತರಗತಿ ಓದುತ್ತಿರುವ ಪ್ರೇರಣಾ 2016 ರಿಂದ ಬ್ಯಾಡ್ಮಿಂಟನ್ ಆಟದಲ್ಲಿ ಸ್ಪರ್ಧಿಸುತ್ತಿದ್ದು 2019-20 ರಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯವನ್ನು ಪ್ರತಿನಿಧಿಸಿದ್ದಲ್ಲದೇ ಬಂಗಾರದ ಪದಕವನ್ನು ಪಡೆದಿದ್ದಾಳೆ. ಮತ್ತು ‘ಟೀಮ್ ಈವೆಂಟ್’ ನಲ್ಲಿ ಕಂಚಿನ ಪದಕ ಪಡೆದಿದ್ದಾಳೆ. ಅಲ್ಲದೇ ರಾಜ್ಯ ಮಟ್ಟದ ‘ನಂಬರ್ ಒನ್’ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಳು.
ಇವಳ ಸಾಧನೆಯನ್ನು ಗುರುತಿಸಿ ಜಿಲ್ಲಾಧಿಕಾರಿ ಕಛೇರಿಯಿಂದ ಆಟಕ್ಕೆ ಪೂರಕವಾಗುವ ಬ್ಯಾಡ್ಮಿಂಟನ್ ಕಿಟ್ ಅನ್ನು ಜಿಲ್ಲಾಧಿಕಾರಿ ಮುಲ್ಲೈಮುಹಿಲನ್ ವಿತರಿಸಿದ್ದಾರೆ. ಅಲ್ಲದೇ ಲಯನ್ಸ್ ಶಾಲೆಯಿಂದ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಈಕೆಗೆ ಉಚಿತ ಶಿಕ್ಷಣ ಸೌಲಭ್ಯ ಕಲ್ಪಿಸಲಾಗಿದೆ.
ನಗರದ ನಂದಕುಮಾರ್ ಶೇಟ್ ಹಾಗೂ ಸ್ವಾತಿ ನಂದಕುಮಾರ್ ದಂಪತಿಗಳ ಪುತ್ರಿಯಾದ ಪ್ರೇರಣಾಳ ಈ ಸಾಧನೆಗೆ ಲಯನ್ಸ್ ಶಿಕ್ಷಣ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು, ಲಯನ್ಸ್ ಶಾಲೆಯ ಶಿಕ್ಷಕ ವೃಂದದವರು ಹಾಗೂ ಲಯನ್ಸ್ ಕ್ಲಬ್ ವತಿಯಿಂದ ಅಭಿನಂದನೆ ಸಲ್ಲಿಸಿದ್ದಾರೆ.