ಕಾರವಾರ: ದೇಶದಾದ್ಯಂತ ಕೇಂದ್ರದ 43 ನೂತನ ಸಚಿವರ ನೇತೃತ್ವದಲ್ಲಿ ಜನಾಶೀರ್ವಾದ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು ಕರ್ನಾಟಕದಲ್ಲಿ ನಾಲ್ವರು ಸಚಿವರ ತಂಡಗಳು ಯಾತ್ರೆ ನಡೆಸಲಿವೆ. ಈ ಯಾತ್ರೆಯ ಅಂಗವಾಗಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮತ್ತು ತಂಡ ಆ.16 ಕ್ಕೆ ಶಿರಸಿಗೆ ಆಗಮಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಹೇಳಿದ್ದಾರೆ.
ಶುಕ್ರವಾರ ಜಿಲ್ಲಾ ಪತ್ರಿಕಾ ಭವನದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮೊದಲಬಾರಿಗೆ ಕೇಂದ್ರದಲ್ಲಿ ಉತ್ತಮ ಮಂತ್ರಿಮಂಡಲ ರಚನೆಯಾಗಿದೆ. 43 ಸಚಿವರ ಪೈಕಿ 11 ಮಹಿಳೆಯರು , 13 ವಕೀಲರು , 5 ಇಂಜಿನಿಯರ್ಸ್ ಗಳು ಹಾಗೂ ಐ.ಎಸ್.ಎಸ್ , ಐ.ಆರ್.ಎಸ್. ಅಧಿಕಾರಿಗಳನ್ನೊಳಗೊಂಡ ಸಮತೋಲಿತ ಮಂತ್ರಿಮಂಡಲ ಕೇಂದ್ರದಲ್ಲಿ ರಚನೆಮಾಡುವ ಮೂಲಕ ಪ್ರಬುದ್ಧ ಮಂತ್ರಿಮಂಡಲವನ್ನು ದೇಶಕ್ಕೆ ನೀಡಲಾಗಿದೆ. ಸದನದಲ್ಲಿ ಕಲಾಪ ನಡೆಯುವಾಗ ನೂತನ ಸಚಿವರನ್ನು ಸದನಕ್ಕೆ ಹಾಗೂ ಸಾರ್ವಜನಿಕರಿಗೆ ಪರಿಚಯಿಸಿಕೊಡುವುದು ಸಂಪ್ರದಾಯ. ಆದರೆ ಈ ಬಾರಿ ವಿರೋಧ ಪಕ್ಷದವರು ಸಂಸತ್ತಿನಲ್ಲಿ ವಿಷಯ ಮಂಡಿಸಲು ಆಸ್ಪದ ನೀಡದೇ ಮಹತ್ವದ ವಿಷಯಗಳ ಚರ್ಚೆಗೆ ತೊಂದರೆ ಉಂಟು ಮಾಡಿದ್ದಾರೆ.
ಹೀಗಾಗಿ ನೂತನವಾಗಿ ಆಯ್ಕೆಯಾದ ಸಚಿವರುಗಳನ್ನು ಜನರಿಗೆ ಪರಿಚಯಿಸಲು ಈ ಜನಾಶೀರ್ವಾದ ಯಾತ್ರೆ ರೂಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯ ಶಿರಸಿಗೆ ಕೆಂದ್ರದ ‘ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ’ ಖಾತೆಯ ರಾಜ್ಯ ಸಚಿವ ‘ರಾಜೀವ್ ಚಂದ್ರಶೇಖರ್’ ನೇತೃತ್ವದಲ್ಲಿ ಜನಾಶೀರ್ವಾದ ಯಾತ್ರೆಯು ಆ. 16 ರಂದು ಹುಬ್ಬಳ್ಳಿಯಲ್ಲಿ ಚಾಲನೆಗೊಂಡು ಮಧ್ಯಾಹ್ನ 3 ಗಂಟೆಗೆ ಶಿರಸಿಗೆ ಆಗಮಿಸಲಿದೆ. ಶ್ರೀ ಮಾರಿಕಾಂಬೆಗೆ ಪೂಜೆಸಲ್ಲಿಸಿ ಯಾತ್ರೆ ಪ್ರಾರಂಭಿಸಲಾಗುತ್ತದೆ.
ಪಕ್ಷದ ಹಿರಿಯರು, ಜನಸಂಘದ ಸಮಯದಲ್ಲಿ ದುಡಿದ ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಲಾಗುತ್ತದೆ. ಹಾಗೂ ಕೊರೊನಾ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸಿದವರ ಮನೆಗಳಿಗೆ ಭೇಟಿ ನೀಡಲಾಗುತ್ತದೆ. ನಂತರ ಎಪಿಎಂಸಿ ಸಭಾಭವನದಲ್ಲಿ ವಿವಿಧ ಕ್ಷೇತ್ರದ ಪ್ರಮುಖರ ಸಭೆನಡೆಸಿ ಅಂಬೇಡ್ಕರ್ ಸಭಾಭವನದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಲಾಗುತ್ತದೆ. ಅಲ್ಲದೇ ಎಲ್ಲೂ ಕೂಡ ಸಾರ್ವಜನಿಕವಾಗಿ ಸಭೆಗಳನ್ನು ಆಯೋಜಿಸಲಾಗಿಲ್ಲ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ನಾಗರಾಜ ನಾಯಕ, ಪ್ರಧಾನ ಕಾರ್ಯದರ್ಶಿ ಗೋವಿಂದ ನಾಯ್ಕ, ಎನ್.ಎಸ್.ಹೆಗಡೆ ಇದ್ದರು.