ಶಿರಸಿ: ಧಾರವಾಡ ಹಾಲು ಒಕ್ಕೂಟದ ನೂತನ ಅಧ್ಯಕ್ಷ ಶಂಕರಪ್ಪ ವೀರಪ್ಪ ಮುಗದ ಅವರು ಶಿರಸಿಯ ಹನುಮಂತಿಯಲ್ಲಿನ ಪಿಪಿಪಿ ಯೋಜನೆಯ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಪ್ಯಾಕಿಂಗ್ ಘಟಕಕ್ಕೆ ಭೇಟಿ ನೀಡಿ ಪ್ಯಾಕಿಂಗ್ ಘಟಕದ ಕಾಮಗಾರಿಯನ್ನು ವೀಕ್ಷಿಸಿ ಪ್ಯಾಕಿಂಗ್ ಘಟಕದ ಕಾಮಗಾರಿಯನ್ನು ಚುರುಕುಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಒಕ್ಕೂಟದ ನೂತನ ನಿರ್ದೇಶಕ ಉತ್ತರ ಕನ್ನಡ ಜಿಲ್ಲೆಯ ಹಾಲು ಉತ್ಪಾದಕರ ಅನುಕೂಲಕ್ಕಾಗಿ ಪ್ಯಾಕಿಂಗ್ ಘಟಕವನ್ನು ಸ್ಥಾಪಿಸಲಾಗುತ್ತಿದ್ದು, ಇದರಿಂದ ಜಿಲ್ಲೆಯ ಹಾಲಿನ ಮಾರುಕಟ್ಟೆಗೆ ಉಪಯೋಗವಾಗಲಿದ್ದು, ಒಕ್ಕೂಟಕ್ಕೂ ಸಹ ಆಗುತ್ತಿದ್ದಂತಹ ಆರ್ಥಿಕ ಹೊರೆ ಕಡಿಮೆಯಾಗುತ್ತದೆ ಎಂದರು. ಜಿಲ್ಲೆಯ ಹಾಲು ಉತ್ಪಾದಕರ ರೈತರ ಪ್ರಗತಿಗಾಗಿ ಜಿಲ್ಲೆಯ ನಿರ್ದೇಶಕರುಗಳಾದ ಸುರೇಶ್ಚಂದ್ರ ಹೆಗಡೆ, ಶಂಕರ ಪಿ ಹೆಗಡೆ ಹಾಗೂ ಪರಶುರಾಮ ವಿ ನಾಯ್ಕ ಇವರುಗಳು ಶ್ರಮಿಸುತ್ತಿದ್ದಾರೆ ಎಂದರು.
ಸುರೇಶ್ಚಂದ್ರ ಹೆಗಡೆ ಮಾತನಾಡಿ ಜಿಲ್ಲೆಯ ಹಾಲು ಉತ್ಪಾದಕ ರೈತರಪರ ಕೆಲಸಗಳಿಗೆ ನನ್ನಿಂದ ಮಾಡಲ್ಪಡುವ ಎಲ್ಲಾ ರೀತಿಯ ಸಹಾಯವನ್ನು ಮಾಡುವುದಾಗಿ ತಿಳಿಸಿದರು. ಶಿರಸಿ ಉಪ ವಿಭಾಗದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಪರಿಚಯ ಪಡೆದು ಶಿಸ್ತಿನಿಂದ ಉತ್ತಮ ರೀತಿಯಲ್ಲಿ ರೈತಪರವಾಗಿ ನಿರ್ದೇಶಕರುಗಳ ಜೊತೆಯಲ್ಲಿ ಕೆಲಸ ನಿರ್ವಹಿಸುವಂತೆ ಸೂಚಿಸಿದರು. ಸಿಬ್ಬಂದಿಗಳ ಅಶಿಸ್ತಿನ ವರ್ತನೆಯನ್ನು ನಾನು ಯಾವಗಲೂ ಯಾವ ಕಾರಣಕ್ಕೂ ಸಹಿಸುವುದಿಲ್ಲ ಮತ್ತು ಅಶಿಸ್ತಿನಿಂದ ನಿರ್ದೇಕರುಳೊಡನೆ ಅಗೌರವದಿಂದ ವರ್ತಿಸುವ ಸಿಬ್ಬಂಧಿಗಳ ಮೇಲೆ ಕಠಿಣ ಶಿಸ್ತು ಕ್ರಮವನ್ನು ಮುಲಾಜಿಲ್ಲದೇ ತೆಗೆದುಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಒಕ್ಕೂಟದ ಇತರ ನಿರ್ದೇಶಕರುಗಳಾದ ಶಂಕರ ಪರಮೇಶ್ವರ ಹೆಗಡೆ, ಹನುಮಂತಗೌಡ ಬಸನಗೌಡ ಭರಮಣ್ಣನವರ, ಗೀತಾ ಸುರೇಶ ಮರಲಿಂಗಣ್ಣವರ,ಬಸನಗೌಡ ಶಿವನಗೌಡ ಮೇಲಿನಮನಿ ಜಿಲ್ಲಾ ಮುಖ್ಯಸ್ಥರಾದ ಎಸ್ ಎಸ್ ಬಿಜೂರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಿರಸಿಗೆ ಭೇಟಿ ನೀಡಿದ ಒಕ್ಕೂಟದ ನೂತನ ಅಧ್ಯಕ್ಷರಿಗೆ ಹಾಗೂ ಇತರ ನಿರ್ದೇಶಕರುಗಳಿಗೆ ಸುರೇಶ್ಚಂದ್ರ ಹೆಗಡೆ ಸಿಹಿ ನೀಡಿದರು.