ನವದೆಹಲಿ: ವೆಹಿಕಲ್ ಸ್ಕ್ರಾಪೇಜ್ ನೀತಿಯನ್ನು ಪ್ರಧಾನಿ ಮೋದಿ ಅವರು ಇಂದು ಬಿಡುಗಡೆ ಮಾಡಿದ್ದು, ಈ ನೀತಿಯು ಹಳೆಯ, ಅಯೋಗ್ಯ, ಮಾಲಿನ್ಯಕಾರಕ ವಾಹನಗಳನ್ನು ಪರಿಸರಸ್ನೇಹಿ ಮಾದರಿಯಲ್ಲಿ ನಿರ್ಮೂಲನೆ ಮಾಡುವುದಕ್ಕೆ ಪೂರಕವಾಗಿದೆ ಎಂದು ತಿಳಿಸಿದ್ದಾರೆ.
ಗುಜರಾತ್‍ನಲ್ಲಿ ನಡೆಯುತ್ತಿರುವ ಇನ್ವೆಸ್ಟರ್ಸ್ ಸಮಿಟ್‍ನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಅವರು ಈ ನೀತಿಯನ್ನು ಬಿಡುಗಡೆ ಮಾಡಿದ್ದಾರೆ.
ಬಳಿಕ ಮಾತನಾಡಿದ ಅವರು, ಈ ನೀತಿ ದೇಶದಲ್ಲಿ ಮಾಲಿನ್ಯ ಕಡಿಮೆ ಮಾಡಲು, ಪರಿಸರ ರಕ್ಷಿಸಲು, ಅಭಿವೃದ್ಧಿಯ ವೇಗವನ್ನು ಸಾಧಿಸಲು ತನ್ನ ಬದ್ಧತೆಯನ್ನು ಪ್ರತಿಬಿಂಬಿಸಲಿದೆ ಎಂದು ಹೇಳಿದ್ದಾರೆ. ಗುಜರಿಗೆ ಯೋಗ್ಯವಲ್ಲದ, ಮಾಲಿನ್ಯಕಾರಕ ವಾಹನಗಳನ್ನು ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ನಿರ್ಮೂಲನೆ ಮಾಡಲು ಇದು ಸಹಾಯ ಮಾಡಲಿದೆ. ಪರಿಸರ ಸ್ನೇಹಿ ಮೌಲ್ಯಗಳ ಜೊತೆಗೆ ಎಲ್ಲಾ ಪಾಲುದಾರರಿಗೂ ಮೌಲ್ಯ ವೃದ್ಧಿಸುವಂತೆ ಮಾಡುವ ಗುರಿಯನ್ನು ಈ ನೀತಿಯ ಮೂಲಕ ಸರ್ಕಾರ ಸಾಧಿಸಲಿದೆ ಎಂದು ಅವರು ಹೇಳಿದ್ದಾರೆ.
ಈ ನೀತಿಯಂತೆ ಹಳೆಯ ವಾಹನವನ್ನು ಗುಜರಿಗೆ ಹಾಕುವಾಗ ಒಂದು ಪ್ರಮಾಣಪತ್ರ ನೀಡಲಾಗುತ್ತದೆ. ಆ ಪ್ರಮಾಣಪತ್ರ ಪಡೆದ ವ್ಯಕ್ತಿ ಹೊಸ ವಾಹನ ಖರೀದಿಸಲು ನೋಂದಣಿ ಶುಲ್ಕ ಪಾವತಿಸಬೇಕಿಲ್ಲ. ಎರಡನೇಯದಾಗಿ ವಾಹನ ಮಾಲೀಕರು ಹಳೆಯ ಕಾರಿನ ನಿರ್ವಹಣೆ ವೆಚ್ಚ, ರಿಪೇರಿ ವೆಚ್ಚ, ಇಂಧನ ದಕ್ಷತೆಯ ಮೇಲಿನ ಹಣವನ್ನು ಉಳಿತಾಯ ಮಾಡಲಿದ್ದಾರೆ ಎಂದು ಮೋದಿ ಹೇಳಿದ್ದಾರೆ.