• Slide
    Slide
    Slide
    previous arrow
    next arrow
  • ಶಿರಸಿಯಲ್ಲಿ ಮಳೆಯಿಂದ 30 ಕೋಟಿ ರೂ.ಹಾನಿ; ಅಧಿಕಾರಿಗಳು ರೈತರ ಸಮಸ್ಯೆಗೆ ಸ್ಪಂದಿಸಿ; ಸ್ಪೀಕರ್ ಕಾಗೇರಿ

    300x250 AD

    ಶಿರಸಿ: ಜಿಲ್ಲೆಯಾದ್ಯಂತ ವಾಡಿಕೆಗಿಂತ ಅಧಿಕ ಮಳೆಯಗಿದ್ದು, ಇನ್ನೂ ಮಳೆಯಾಗುವ ಸಾಧ್ಯತೆ ಇದೆ. ಕಾರಣ ಅಧಿಕಾರಿಗಳು ಜನರ ಸಮಸ್ಯೆಗೆ ತಕ್ಷಣ ಸ್ಪಂದನೆ ನೀಡಬೇಕು. ಈಗ ಶಿರಸಿ ತಾಲೂಕಿನಲ್ಲಿ ಸುರಿದ ಮಳೆಹಾನಿಯನ್ನು 30 ಕೋಟಿ ಎಂದು ಅಂದಾಜು ಮಾಡಲಾಗಿದ್ದು, ಅಧಿಕಾರಿಗಳು ಶೀಘ್ರದಲ್ಲಿ ಸಮೀಕ್ಷೆ ನಡೆಸಿ ವರದಿ ನೀಡಬೇಕೆಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.


    ನಗರದ ಮಿನಿ ವಿಧಾನಸೌಧದಲ್ಲಿ ಬುಧವಾರ ಅಧಿಕಾರಿಗಳ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಜುಲೈ ತಿಂಗಳವರೆಗೆ ವಾಡಿಕೆ ಮಳೆ 1607 ಮಿ ಮೀ. ಇದ್ದು, ಈ ವರ್ಷ 2192 ಮಿ ಮೀ. ಮಳೆಯಾಗಿದೆ. ನದಿ, ಹಳ್ಳ ಕೊಳ್ಳಗಳು ಉಕ್ಕಿ ಹರಿದ ಕಾರಣ ಹಲವು ಅದ್ವಾನಗಳು ಉಂಟಾಗಿವೆ.


    ತಾಲೂಕಿನಲ್ಲಿ ಇದುವರೆಗೆ 17 ಮನೆಗಳು ಬಿದ್ದಿದ್ದು, ತಲಾ 95100 ರೂ. ಪರಿಹಾರ ನೀಡಿದ್ದೇವೆ. ಭತ್ತ ಮತ್ತು ಅಡಕೆ ತೋಟಕ್ಕೆ ತೀವ್ರ ಹಾನಿ ಉಂಟಾಗಿದೆ. 751 ಎಕರೆ ಭತ್ತದ ಗದ್ದೆ ನೀರು ನುಗ್ಗಿ ಹಾನಿಯಾದರೆ 96 ಎಕರೆ ಭತ್ತದ ಗದ್ದೆಯಲ್ಲಿ ಮಣ್ಣು ನಿಂತು ರೈತರು ಹಾನಿ ಅನುಭವಿಸಿದ್ದಾರೆ. ಅಡಕೆ ಬೆಳೆಯಲ್ಲಿ 96 ಎಕರೆ ಪ್ರದೇಶದಲ್ಲಿ ಬೆಳೆ ಹಾನಿ, 2.35 ಎಕರೆ ಅಡಕೆ ತೋಟ ಕುಸಿತ ಹಾಗೂ 431 ಎಕರೆ ಪ್ರದೇಶದಲ್ಲಿ ಮಣ್ಣು ನಿಂತು ಹಾನಿಯಾಗಿದೆ ಎಂದರು. ಲೊಕೋಪಯೋಗಿ ಇಲಾಖೆಗೆ ಸೇರಿದ 23 ರಸ್ತೆಗಳಿಂದ ಒಟ್ಟು 60 ಕಿ.ಮೀ.ಗಳಷ್ಟು ರಸ್ತೆ ಹಾನಿಯಾಗಿದೆ.


    ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 94 ರಸ್ತೆಗಳ 496 ಕಿ.ಮೀ, 19 ಸೇತುವೆ, 4 ಕಾಲು ಸಂಕಗಳು ಹಾನಿಯಾಗಿವೆ. 46 ಶಾಲೆಗಳಿಗೆ ವಿವಿಧ ರೀತಿಯಲ್ಲಿ ಹಾನಿ ಉಂಟಾಗಿದ್ದು, 800 ವಿದ್ಯುತ್ ಕಂಬಗಳು, 33 ವಿದ್ಯುತ್ ಪರಿವರ್ತಕಗಳು ಹಾನಿ ಆಗಿವೆ. ಆದರೆ, ಹೆಸ್ಕಾಂ ಸಿಬ್ಬಂದಿಯ ಸತತ ಶ್ರಮದಿಂದಾಗಿ ತ್ವರಿತವಾಗಿ ವಿದ್ಯುತ್ ವ್ಯವಸ್ಥೆ ಸರಿಪಡಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

    300x250 AD

    ತ್ವರಿತ ಸಮೀಕ್ಷೆಗೆ ಸೂಚನೆ:
    ಮಳೆಯಿಂದಾಗಿ ಕೃಷಿ ಕ್ಷೇತ್ರಕ್ಕೆ ಬಹುದೊಡ್ಡ ಹಾನಿ ಆಗಿದೆ. ಅಧಿಕಾರಿಗಳಿಗೆ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತ್ವರಿತವಾಗಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದೇನೆ. ಉದ್ಯೋಗ ಖಾತ್ರಿ ಯೋಜನೆ ಬಳಸಿಕೊಂಡು ಕೃಷಿ ಹಾನಿ ಸರಿಪಡಿಸಿಕೊಳ್ಳಲು ಅನುಮತಿ ಸದ್ಯವೇ ನೀಡಲಾಗುತ್ತದೆ ಎಂದರು.


    ಕೊವಿಡ್ ರೋಗಿಗಳು ಹೋಮ್ ಐಸೋಲೇಶನ್ ಮಾಡುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ವ್ಯಕ್ತಗೊಂಡಿದೆ. ಹೀಗಾಗಿ, ತಾಲೂಕಿನಲ್ಲಿ ಈಗಾಗಲೇ ಇರುವ ಚಿಪಗಿ ಮತ್ತು ಕಲ್ಲಿ ಶಾಲೆಯ ಜೊತೆ ಇನ್ನೂ 8 ಕಡೆಗಳಲ್ಲಿ ಐಸೋಲೇಶನ್ ಸೆಂಟರ್ ಆರಂಭಿಸಲು ನಿರ್ಧರಿಸಿದ್ದೇವೆ. ಕೊವಿಡ್ ಸೋಂಕಿತರಿಗೆ ಐಸೋಲೇಶನ್ ಕೇಂದ್ರ ಸಮೀಪದಲ್ಲಿಯೇ ಲಭಿಸುವ ಮಾದರಿಯಲ್ಲಿ ಈ ಕೇಂದ್ರಗಳನ್ನು ಆರಂಭಿಸುತ್ತೇವೆ ಎಂದರು. ಶಿರಸಿ ಕುಮಟಾ ರಸ್ತೆಯ ಬದಲಿ ಮಾರ್ಗಗಳಲ್ಲಿಯೂ ರಸ್ತೆಗಳು ಹಾಳಾಗಿದ್ದು, ಮಳೆ ನಿಂತ ತಕ್ಷಣ ರಿಪೇರಿ ಕಾರ್ಯ ಆರಂಭಿಸುತ್ತೇವೆ. ಶಿರಸಿ ಕುಮಟಾ ರಸ್ತೆ ಕಾಮಗಾರಿಯನ್ನು ನಿಗದಿತ ಅವಧಿಯ ಒಳಗೆ ಪೂರ್ಣಗೊಳಿಸದಿದ್ದರೆ ಗುತ್ತಿಗೆದಾರರ ಮೇಲೆ ಕಾನೂನು ಕ್ರಮ ಆಗಲಿದೆ ಎಂದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಎಂ.ಆರ್ ಕುಲಕರ್ಣಿ ಇದ್ದರು.


    ಶಿರಸಿ ಕುಮಟಾ ರಾಷ್ಟ್ರೀಯ ಹೆದ್ದಾರಿ ಇದುವರೆಗೂ ಪ್ರಾಧಿಕಾರದ ಧಾರವಾಡ ಕಚೇರಿ ವ್ಯಾಪ್ತಿಯಲ್ಲಿ ಇತ್ತು. ಈಗ ಅದನ್ನು ಮಂಗಳೂರು ಕಚೇರಿ ವ್ಯಾಪ್ತಿಗೆ ಸೇರಿಸಲಾಗಿದೆ. ಮಂಗಳೂರು ಕಚೇರಿ ಇಂಜಿನಿಯರ್ ಗಳು ಇನ್ನೂ ಈ ರಸ್ತೆಯ ಸ್ಥಿತಿಗತಿಯ ಬಗ್ಗೆ ಅಧ್ಯಯನ ಮಾಡಬೇಕಿದೆ. -ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಸಭಾಧ್ಯಕ್ಷ

    Share This
    300x250 AD
    300x250 AD
    300x250 AD
    Leaderboard Ad
    Back to top