ಕುಮಟಾ: ತಾಲೂಕಿನ ತಣ್ಣೀರಕುಳಿಯಿಂದ ದುಂಡುಕುಳಿಗೆ ತೆರಳಲು ಅನುಕೂಲವಾಗುವಂತೆ ತೂಗುಸೇತುವೆ ನಿರ್ಮಿಸುವಂತೆ ಆ ಭಾಗದ ಜನತೆ ಬೇಡಿಕೆಯಿಟ್ಟಿದ್ದು, ಅದನ್ನು ಮಂಜೂರಿ ಮಾಡಿಸುವ ಕುರಿತು ಹೆಚ್ಚಿನ ಪ್ರಯತ್ನ ನಡೆಸುವುದಾಗಿ ಶಾಸಕ ದಿನಕರ ಕೆ. ಶೆಟ್ಟಿ ಭರವಸೆ ನೀಡಿದರು.
ಜಿಲ್ಲಾಡಳಿತ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಹೆಗಡೆಯ ಗ್ರಾಪಂ ವ್ಯಾಪ್ತಿಯ ತಣ್ಣೀರಕುಳಿಯಲ್ಲಿ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಹೈಟೆಕ್ ಅಂಗನವಾಡಿ ಕಟ್ಟಡವನ್ನು ಉದ್ಘಾಟಿಸಿ, ಅವರು ಮಾತನಾಡಿದರು. ಜಿಲ್ಲಾಧಿಕಾರಿ ಹಾಗೂ ಸಿಇಓ ಅವರು ಚಿಕ್ಕ ಮಕ್ಕಳಿಗೆ ಅನುಕೂಲವಾಗಲು ಒಂದು ಉತ್ತಮ ಹೈಟೆಕ್ ಅಂಗನವಾಡಿ ನಿರ್ಮಿಸುವ ಕುರಿತು ನನ್ನೊಡನೆ ಚರ್ಚೆ ನಡೆಸಿದ್ದ ಸಂದರ್ಭದಲ್ಲಿ ನಾನು ಹಾಲಕ್ಕಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿರುವ ತಣ್ಣೀರಕುಳಿಯಲ್ಲಿ ಮಾಡಿದರೆ ಮಕ್ಕಳು ಇನ್ನೂ ಹೆಚ್ಚು ಸುಶೀಕ್ಷಿತರಾಗುತ್ತಾರೆ. ಜೊತೆಗೆ ಅಲ್ಲಿನ ತಾಯಂದಿರಿಗೂ ತನ್ನ ಮಗು ಅಂಗವಾಡಿಗೆ ಹೋಗಿ ಮುಂದೆ ಉನ್ನತ ವಿದ್ಯಾಭ್ಯಾಸ ಮಾಡಬೇಕು ಎನ್ನುವ ಆಸೆ ಬರುವಂತಾಗಬೇಕು ಎಂದಿದ್ದೆ. ಅದರಂತೆ ಈಗ ಇಲ್ಲಿ ಹೈಟೆಕ್ ಅಂಗನವಾಡಿ ನಿರ್ಮಾಗೊಂಡಿದೆ. ಪಾಲಕರು ಚಿಕ್ಕ ಮಕ್ಕಳಿಗೆ ಶಾಲೆಗೆ ಕಳುಹಿಸಿ, ಅವರು ಉತ್ತಮ ವಿದ್ಯಾಭ್ಯಾಸ ಮಾಡುವಂತೆ ನೋಡಿಕೊಳ್ಳಬೇಕು ಎಂದರು.
ಇನ್ನು, ಹಾಲಕ್ಕಿ ಸಮಾಜದವರು ಕಲ್ಯಾಣ ಮಂಟಪ ನಿರ್ಮಿಸುತ್ತೇನೆ ಎಂದಾಗ ಈ ಕಟ್ಟಡ ನಿರ್ಮಾಣಕ್ಕೆಂದು ನಾನು ಅರ್ಧ ಗುಂಟೆ ಜಾಗವನ್ನು ನೀಡಿದೆ. ಜೊತೆಗೆ ಸರ್ಕಾರದಿಂದ ಒಂದು ಕೊಟಿ ರೂ. ಅನುದಾನವನ್ನು ಕೋಡಿಸಿದ್ದೇನೆ ಎಂದರು ಹೇಳುವ ಮೂಲಕ ಹಾಲಕ್ಕಿ ಸಮಾಜಕ್ಕಾಗಿ ಮಾಡಿರುವ ಸಹಾಯವನ್ನು ಶಾಸಕರು ಈ ಸಂದರ್ಭದಲ್ಲಿ ನೆನಪು ಮಾಡಿಕೊಂಡರು.
ಸ್ಥಳೀಯ ಗ್ರಾ ಪಂ ಉಪಾಧ್ಯಕ್ಷ ಶಾಂತಾರಾಮ ನಾಯ್ಕ ಮಾತನಾಡಿ, ಸರ್ಕಾರದಿಂದ ನಿರ್ಮಿಸಲಾದ ಈ ಹೈಟೆಕ್ ಅಂಗನವಾಡಿಯನ್ನು ಈ ಭಾಗದ ಮಕ್ಕಳು ಹಾಗೂ ತಾಯಂದಿರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಗ್ರಾ ಪಂ ಅಧ್ಯಕ್ಷೆ ಚಂದ್ರಕಲಾ ಪಟಗಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಜಿ.ಪಂ ಸದಸ್ಯ ರತ್ನಾಕರ ನಾಯ್ಕ, ಪ್ರಮುಖರಾದ ತಿಮ್ಮಣ್ಣ ಗೌಡ, ವಿನೋದ ಪ್ರಭು, ಗ್ರಾಂ.ಪಂ ಸದಸ್ಯರು, ಸಿಡಿಪಿಒ ನಾಗರತ್ನ ನಾಯಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.