ಕುಮಟಾ: ತಾಲೂಕಿನ ಮಿರ್ಜಾನಿನ ಕೆನರಾ ಬ್ಯಾಂಕಿನ ಶಾಖೆಯಲ್ಲಿ ಸಿಬ್ಬಂದಿಯೋರ್ವರು ಗ್ರಾಹಕರೊಂದಿಗೆ ಕನ್ನಡದಲ್ಲಿ ವ್ಯವಹಾರ ನಡೆಸುವುದಿಲ್ಲ ಎಂಬ ಸ್ಥಳೀಯರ ಆರೋಪದ ಮೇಲೆ ಕ.ರ.ವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಬ್ಯಾಂಕಿಗೆ ತೆರಳಿ, ಬ್ಯಾಂಕಿನ ಸಿಬ್ಬಂದಿಯೊಂದಿಗೆ ಚರ್ಚಿಸಿ, ಕನ್ನಡದಲ್ಲಿ ವ್ಯವಹರಿಸುವಂತೆ ತಿಳಿಸಿದ್ದಾರೆ.
ಬ್ಯಾಂಕಿಗೆ ಹಣಕಾಸಿನ ವ್ಯವಹಾರಕ್ಕಾಗಿ ಆಗಮಿಸುವ ಹಿರಿಯ ನಾಗರೀಕರು ಹಾಗೂ ಮಹಿಳೆಯರ ಜೊತೆಗೆ ಬ್ಯಾಂಕ್ ಸಿಬ್ಬಂದಿ ಸರಿಯಾಗಿ ಕನ್ನಡ ಭಾಷೆಯಲ್ಲಿ ವ್ಯವಹರಿಸುವುದಿಲ್ಲ. ಈ ಕಾರಣಕ್ಕೆ ಗ್ರಾಹಕರಿಗೆ ವ್ಯವಹಾರ ನಡೆಸುವುದು ಕಷ್ಟವಾಗಿದೆ. ಇವರನ್ನು ಕೂಡಲೇ ವರ್ಗಾಯಿಸಿ, ಕನ್ನಡ ಭಾಷೆ ತಿಳಿದಿರುವ ಸಿಬ್ಬಂದಿ ನೇಮಿಸಬೇಕೆಂದು ಸ್ಥಳೀಯರು ಆಗ್ರಹಿಸಿದರು.
ಈ ಬಗ್ಗೆ ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಮಾತನಾಡಿ, ಈ ಬ್ಯಾಂಕ್‌ನಲ್ಲಿ ಹಲವಾರು ಗ್ರಾಹಕರಿದ್ದಾರೆ. ಬ್ಯಾಂಕ್ ಸಿಬ್ಬಂದಿಯ ಬೇಜವಾಬ್ದಾರಿ ಹಾಗೂ ಕನ್ನಡ ಭಾಷೆ ಬರದಿರುವ ಕಾರಣದಿಂದ ವ್ಯವಹರಿಸಲಾಗದೇ, ಗ್ರಾಹಕರು ಅಸಮಾಧಾನಗೊಂಡಿದ್ದಾರೆ. ಕಾರಣ ಅವರ ಸ್ಥಳದಲ್ಲಿ ಬೇರೊಬ್ಬರನ್ನು ನೇಮಿಸಬೇಕು. ಇಲ್ಲವೇ, ಒಂದು ತಿಂಗಳ ಕಾಲಾವಕಾಶದಲ್ಲಿ ಕನ್ನಡ ಕಲಿತು, ಕನ್ನಡ ಭಾಷೆಯಲ್ಲೇ ಮಾತನಾಡುವಂತಾಗಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಸ್ಥಳೀಯರ ಸಹಕಾರದೊಂದಿಗೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಶಿವರಾಮ ಹರಿಕಾಂತ, ಉದಯ ಹರಿಕಾಂತ ಸೇರಿದಂತೆ ಇನ್ನಿತರರು ಇದ್ದರು.