ಕುಮಟಾ: ರಾಮಾಯಣ ಪಾರಾಯಣದಿಂದ ಧಾರ್ಮಿಕ ವಾತಾವರಣ ನಿರ್ಮಾಣ ಸಾಧ್ಯ. ರಾಮಾಯಣದ ಸತ್ವ ಶಕ್ತಿ ಅಂಥದ್ದಾಗಿದ್ದು, ಇಂಥ ಅನೇಕ ಸನ್ನಿವೇಶಗಳು ಸ್ವತಃ ಅನುಭವಕ್ಕೆ ಬಂದಿವೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನುಡಿದರು.
ಬೆಂಗಳೂರಿನ ಗಿರಿನಗರದ ಶ್ರೀರಾಮಶ್ರಮದಲ್ಲಿ ಶ್ರೀರಾಮಸಾಮ್ರಾಜ್ಯ ಪಟ್ಟಾಭಿಷೇಕ ನೆರವೇರಿಸಿ ಅವರು ಆಶೀರ್ವಚನ ನೀಡಿದರು. ಆಡಳಿತ ಎಂದರೆ ರಾಮರಾಜ್ಯದ ನೆನಪಾಗುತ್ತದೆ. ರಾಮನ ನಂತರ ಕೋಟ್ಯಾಂತರ ರಾಜರು ಆಳಿದ್ದಾರಾದರೂ, ಇಂದಿಗೂ ರಾಮರಾಜ್ಯಕ್ಕೆ ಸಾಟಿಯಿಲ್ಲ. ಹಾಗೆಯೇ ರಾಮಾಯಣ ಆದಿಕಾವ್ಯವಾಗಿದ್ದು, ಅದರ ನಂತರ ಕೋಟ್ಯಾಂತರ ಕಾವ್ಯ ರಚನೆಯಾಗಿದ್ದರೂ, ರಾಮಾಯಣಕ್ಕೆ ಸಾಟಿಯಿಲ್ಲ. ರಾಮಾಯಣದ ಒಂದೊಂದು ಸರ್ಗ ಓದುತ್ತ ಹೋದಾಗ ಒಂದೊಂದು ಭಾವ ಹಾಗೂ ಸಾಕ್ಷಾತ್ಕಾರ ಪ್ರಾಪ್ತವಾಗುತ್ತದೆ ಎಂದರು.
ವಿಕೃತವಾದ ಮನಸ್ಸೇ ರಾವಣ. ಹತ್ತು ಇಂದ್ರಿಯಗಳೇ ರಾವಣನ ಹತ್ತು ತಲೆಗಳ ಪ್ರತೀಕ. ವಿವೇಕ ಎಂಬ ಬಾಣ ಪ್ರಯೋಗದಿಂದಷ್ಟೇ ಇದನ್ನು ನಿಗ್ರಹಿಸಿ ರಾಮರಾಜ್ಯ ಸ್ಥಾಪನೆ ಸಾಧ್ಯ. ಧರ್ಮ ಶಾಶ್ವತ, ಧರ್ಮ ಮಾರ್ಗದಲ್ಲಿ ಸಾಗಿದ ವಿಭೀಷಣ, ಹನುಮಂತಾದಿಗಳು ಶಾಶ್ವತರಾದರೆ, ಅಧರ್ಮದಿಂದ ರಾವಣ ವಿನಾಶಹೊಂದಿದ್ದಾನೆ ಎಂದು ವಿಶ್ಲೇಷಿಸಿದರು.
ರಾಮಾಯಣವನ್ನು ಓದುತ್ತ ಬೆಳದರೆ ವ್ಯಕ್ತಿತ್ವ ವಿಕಸನ ಸಾಧ್ಯ. ಆಗ ರಾಮ, ಸೀತೆ, ಭರತ, ಹನುಮ, ವಿಭೀಷಣರಂತಹ ಗುಣಗಳ ಪ್ರಜೆಗಳನ್ನು ನೋಡಲು ಸಾಧ್ಯ. ಅದಿಲ್ಲದಿದ್ದರೆ ಮಂಥರೆ, ಕೈಕೇಯಿ, ರಾವಣನಂತವರು ಬೆಳೆಯುತ್ತಾರೆ ಎಂದು ಶ್ರೀಗಳು ಹೇಳಿದರು.
ಶ್ರೀರಾಮಸಾಮ್ರಾಜ್ಯ ಪಟ್ಟಾಭಿಷೇಕ: ಅಗಸ್ತ್ಯ ಮುನಿ ಪೂಜಿತ, ಶ್ರೀಕರಾರ್ಚಿತ ಸೀತಾರಾಮಚಂದ್ರ ದೇವರಿಗೆ ಶ್ರೀಗಳು ಸಾಮ್ರಾಜ್ಯ ಪಟ್ಟಾಭಿಷೇಕ ನೆರವೇರಿಸಿದರು. ದೇಶದ ವಿವಿಧ ಪುಣ್ಯನದಿಗಳ ಜಲ, ಧಾನ್ಯ, ಮಂಗಲ ದ್ರವ್ಯಗಳಿಂದ ಅಭಿಷೇಕವನ್ನು ಮಾಡಿ, ದೇವರಾಜೋಪಚಾರ ಪೂಜೆ ನಡೆಯಿತು. ಶ್ರೀಮಠದ ಶಾಖೆಗಳು, ಅಂಗಸಂಸ್ಥೆಗಳು, ಆಡಳಿತ ವ್ಯವಸ್ಥೆ ಹಾಗೂ ಶಿಷ್ಯ ಸಮುದಾಯದಿಂದ ಶ್ರೀರಾಮದೇವರಿಗೆ ಪಟ್ಟಕಾಣಿಕೆ ಸಲ್ಲಿಸಲ್ಪಟ್ಟಿತು.
ಶ್ರೀಗಳಿಂದ ನಿತ್ಯ ರಾಮಾಯಣ ಪಾರಾಯಣ:
ಜಗದ್ಗುರು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಸಂನ್ಯಾಸ ಸ್ವೀಕರಿಸಿದ ದಿನದಿಂದಲೂ ನಿತ್ಯ ವಾಲ್ಮೀಕಿ ರಾಮಾಯಣದ ಪಾರಾಯಣ ಮಾಡುತ್ತಿದ್ದು, ತಮ್ಮ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳ ನಡುವೆಯೂ, ಒಂದು ದಿನವೂ ತಪ್ಪದೇ ರಾಮಾಯಣದ ಒಂದೊಂದು ಸರ್ಗದ ಪಾರಾಯಣವನ್ನು ನಿತ್ಯ ಮಾಡುತ್ತಿದ್ದಾರೆ. ಸಮಗ್ರ ರಾಮಾಯಣ ಪಾರಾಯಣದ ಕೊನೆಯಲ್ಲಿ ಶ್ರೀಕರಾರ್ಚಿತ ರಾಮದೇವರಿಗೆ ಪಟ್ಟಾಭಿಷೇಕ ಸಲ್ಲಿಸಲಾಗುತ್ತದೆ.
ಈ ಸಂದರ್ಭದಲ್ಲಿ ಶ್ರೀಮಠದ ಶಾಖೆಗಳ ಪ್ರಮುಖರು, ಅಂಗಸಂಸ್ಥೆಗಳ ಪ್ರಮುಖರು, ಆಡಳಿತ ಮಂಡಳಿಯ ಪ್ರಮುಖರು ಹಾಗೂ ಶಿಷ್ಯ ಸಮುದಾಯದವರಿದ್ದರು.