• Slide
    Slide
    Slide
    previous arrow
    next arrow
  • ಕೃಷಿಕರ ಬೆಟ್ಟಭೂಮಿ ಅಭಿವೃದ್ಧಿಯಲ್ಲಿ ಅರಣ್ಯ ಇಲಾಖೆಯೂ ಭಾಗಿಯಾಗಲಿ: ನರೇಂದ್ರ ಹೊಂಡಗಾಶಿ

    300x250 AD


    ಶಿರಸಿ: ಬೆಟ್ಟ ಭೂಮಿಯ ನಿರ್ವಹಣೆ ಮಾಡುವ ಬಗ್ಗೆ ಬೆಟ್ಟದಾರರಿಗೆ ಮಾಹಿತಿ ಒದಗಿಸುವಿಕೆ ಹಾಗೂ ಸಸ್ಯಾಭಿವೃದ್ಧಿ ಮಾಡುವಲ್ಲಿ ಅರಣ್ಯ ಇಲಾಖೆಯ ಜವಾಬ್ದಾರಿ ಕೂಡಾ ಇದೆ. ಅರಣ್ಯ ಇಲಾಖೆಯು ಈ ನಿಟ್ಟಿನಲ್ಲಿ ಗಮನ ಹರಿಸುತ್ತಿಲ್ಲ. ಈ ಬಗ್ಗೆ ಅರಣ್ಯ ಇಲಾಖೆಯು ಹೆಚ್ಚು ಮುತುವರ್ಜಿ ವಹಿಸಬೇಕು ಹಾಗೂ ಬೆಟ್ಟದಾರರಿಗೆ ಬೆಟ್ಟಗಳನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ಸಹಕರಿಸಬೇಕು ಕೃಷಿಕರ ಬೆಟ್ಟ ಭೂಮಿ ಅಭಿವೃದ್ಧಿಯಲ್ಲಿ ಅರಣ್ಯ ಇಲಾಖೆಯೂ ಭಾಗಿಯಾಗಬೇಕು ಎಂದು ಬೆಟ್ಟ ಜಾಗೃತಿ ಅಭಿಯಾನದ ಸಂಚಾಲಕರಾದ ನರೇಂದ್ರ ಹೆಗಡೆ, ಹೊಂಡಗಾಶಿ ಹೇಳಿದರು.


    ಅವರಿಂದು ಶಿರಸಿಯ ಟಿಆರ್‌ಸಿ ಸಭಾಭವನದಲ್ಲಿ ನಡೆದ ಬೆಟ್ಟಭೂಮಿಯ ಮಹತ್ವ ಮತ್ತು ಉಪಯೋಗದ ಕುರಿತು ನಡೆದ ಕೃಷಿ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡುತ್ತಿದ್ದರು. ಉತ್ತರಕನ್ನಡ ಜಿಲ್ಲೆಯ ತೋಟಗಾರ ಕೃಷಿಕರಿಗೆ ಬೆಟ್ಟ ಭೂಮಿಯು ಸರ್ಕಾರವು ನೀಡಿದ ವಿಶೇಷವಾದ ಸವಲತ್ತಾಗಿದೆ. ತೋಟಗಾರರಿಗೆ ಅವಶ್ಯವಿರುವ ಕೃಷಿ ಪೂರಕ ಪದಾರ್ಥಗಳನ್ನು ಬಳಕೆಮಾಡಿಕೊಳ್ಳಲು ವಿಶೇಷ ಸೌಲಭ್ಯದಡಿ ಸರ್ಕಾರ ಅವಕಾಶ ಕಲ್ಪಿಸಿದೆ. ಬೆಟ್ಟಭೂಮಿಯ ಸವಲತ್ತುಗಳನ್ನು ಪಡೆಯುವುದು ಎಷ್ಟು ಮುಖ್ಯವೋ ಬೆಟ್ಟಭೂಮಿಯ ನಿಯಮಗಳನ್ನು ಪಾಲಿಸುವುದು ಸಹ ಅಷ್ಟೇ ಮುಖ್ಯವಾಗಿದೆ. ಚೆನ್ನಾಗಿ ನಿರ್ವಹಿಸಿದ ಬೆಟ್ಟ ಜೀವ ವೈವಿಧ್ಯತೆಯ ತಾಣವಾಗಿದೆ. ನಮ್ಮ ಜಿಲ್ಲೆಯ ಬೆಟ್ಟ ಲ್ಯಾಂಡ್‌ಗೆ ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ(ಎಫ್.ಎ.ಓ)ಜಾಗತಿಕ ಮಹತ್ವದ ’ಕೃಷಿ ಪರಂಪರಾ ವ್ಯವಸ್ಥೆ’ ಮಾನ್ಯತೆ ನೀಡಿದೆ. ಸರ್ಕಾರವು ಕರ್ನಾಟಕ ಅರಣ್ಯ ಕೈಪಿಡಿ 1976, ಪ್ಯಾರಾ 131 ಎಫ್ 7(11)ಅಡಿಯಲ್ಲಿ ತಿದ್ದುಪಡಿ ತಂದು ಬೆಟ್ಟದಾರರಿಗೆ ಬೆಟ್ಟದಲ್ಲಿ ಸ್ವತ: ಅವರು ಬೆಳೆದ ಅರಣ್ಯ/ಅರಣ್ಯ ಪೂರಕ ಉತ್ಪನ್ನಗಳಲ್ಲಿ ಶೇ.75 ಪಾಲನ್ನು ಹೊಂದಲು ಅವಕಾಶ ಮಾಡಿಕೊಟ್ಟಿದೆ ಎಂದರು.


    ಮತ್ತೋರ್ವ ಸಂಪನ್ಮೂಲ ವ್ಯಕ್ತಿಯಾದ ಟಿಎಸ್‌ಎಸ್ ಕೃಷಿ ಸಲಹೆಗಾರರಾದ ಶ್ರೀಕಾಂತ ಭಟ್, ಗೊರೇಬೈಲ್ ಮಳೆಗಾಲದಲ್ಲಿ ತೋಟದ ನಿರ್ವಹಣಾ ಕ್ರಮಗಳ ಕುರಿತು ಮಾತನಾಡುತ್ತಾ, ಕೃಷಿಯಲ್ಲಿ ಸಾವಯವ ಪದಾರ್ಥಗಳ ಬಳಕೆಯ ಜೊತೆ ಆಧುನಿಕತೆಗೆ ಕೃಷಿಕರು ಹೆಚ್ಚು ಒತ್ತು ನೀಡಬೇಕು ಎಂದರು.


    ಟಿಆರ್‌ಸಿ ಅಧ್ಯಕ್ಷರು, ಟಿಎಸ್‌ಎಸ್ ಕಾರ್ಯಾಧ್ಯಕ್ಷರು ಹಾಗೂ ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ರಾಮಕೃಷ್ಣ ಶ್ರೀಪಾದ ಹೆಗಡೆ, ಕಡವೆ ಅಧ್ಯಕ್ಷತೆ ವಹಿಸಿದ್ದರು. ಟಿಆರ್‌ಸಿ ಉಪಾಧ್ಯಕ್ಷರಾದ ಲೋಕೇಶ ಜಿ. ಹೆಗಡೆ ಹುಲೇಮಳಗಿ ಹಾಗೂ ಎಲ್ಲ ನಿರ್ದೇಶಕರುಗಳು ಉಪಸ್ಥಿತರಿದ್ದರು.
    ಟಿಆರ್‌ಸಿ ಮುಖ್ಯಕಾರ್ಯನಿರ್ವಾಹಕರಾದ ರಮೇಶ ಹೆಗಡೆ, ಬಾಳೆಗದ್ದೆ ಸ್ವಾಗತಿಸಿದರು. ನಿರ್ದೇಶಕರಾದ ಶಿವಾನಂದ ಭಟ್, ನಿಡಗೋಡ ಪ್ರಾಸ್ತಾವಿಕ ಮಾತನಾಡಿದರು. ಗಜಾನನ ಹೆಗಡೆ, ಕುರುವಣಿಗೆ ನಿರ್ವಹಿಸಿದರು.

    300x250 AD


    ಸಂಘದ ಕೃಷಿಕ ಸದಸ್ಯರ ಅನುಕೂಲಕ್ಕಾಗಿ ಕೃಷಿ ಮಾಹಿತಿ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ. ಸದಸ್ಯರಿಗೆ ಕೊರತೆಯಿರುವ ಅಗತ್ಯ ಕೃಷಿ ಮಾಹಿತಿ ಹಾಗೂ ಸರಕಾರದಿಂದ ರೈತರಿಗೆ ದೊರಕುವ ಸೇವಾ ಸೌಲಭ್ಯಗಳ ಮಾಹಿತಿಗಳನ್ನು ಒದಗಿಸಬೇಕೆಂಬುದು ಸಂಘದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸದಸ್ಯರು ಸಕ್ರಿಯವಾಗಿ ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಳ್ಳಬೇಕಿದೆ.

    ರಾಮಕೃಷ್ಣ ಶ್ರೀಪಾದ ಹೆಗಡೆ, ಕಡವೆ, ಅಧ್ಯಕ್ಷರು, ಟಿಆರ್‌ಸಿ.

    Share This
    300x250 AD
    300x250 AD
    300x250 AD
    Leaderboard Ad
    Back to top