ಗೋಕರ್ಣ: ಬೆಂಗಳೂರಿನಿಂದ ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದ ಯುವಕನೋರ್ವ ಸಮುದ್ರದಲ್ಲಿ ಈಜಲು ಹೋಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಬೆಂಗಳೂರಿನ ಬಿಟಿಎಂ ಲೇ ಔಟ್ ನಿವಾಸಿ ಅರುಣ್ ಲಕ್ಕಪ್ಪ(27) ಮೃತ ದುರ್ದೈವಿ. ಈತ ಹಾಗೂ ಎಂಟು ಜನ ಗೆಳೆಯರು ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದರು.
ಸ್ಥಳೀಯರು ಎಚ್ಚರಿಕೆ ನೀಡಿದರೂ ಸಮುದ್ರಕ್ಕೆ ಈಜಾಡಲು ಇಳಿದಿದ್ದಾರೆ. ಅಲೆಯ ರಭಸಕ್ಕೆ ಇಬ್ಬರು ಸಿಕ್ಕಿ ಕೊಚ್ಚಿ ಹೋಗಿದ್ದು ಉಳಿದವರು ಈಜಿ ದಡ ಸೇರಿದ್ದಾರೆ. ಆ ಪೈಕಿ ಒಬ್ಬನನ್ನು ಲೈಫ಼್ ಗಾರ್ಡ್ ಗಳು ರಕ್ಷಣೆ ಮಾಡಿದ್ದು ಅರುಣ್ ಎಂಬಾತ ಅಲೆಯ ಅಬ್ಬರಕ್ಕೆ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದಾನೆ. ಆತನ ಮೃತದೇಹಕ್ಕಾಗಿ ತೀವ್ರ ಹುಡುಕಾಟ ನಡೆಯಿತ್ತಿದ್ದು ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳೀಯರು ಪ್ರವಾಸಿಗರಿಗೆ ಸಮುದ್ರಕ್ಕೆ ಇಳಿಯಬೇಡಿ ಎಂಬ ಎಚ್ಚರಿಕೆ ನೀಡುತ್ತಿದ್ದರೂ ಪ್ರವಾಸಿಗರ ನಿರ್ಲಕ್ಷ್ಯದಿಂದಾಗಿ ಇಂತಹ ದುರ್ಘಟನೆಗಳು ನಡೆಯುತ್ತಿದೆ. ಪ್ರವಾಸಕ್ಕೆಂದು ಬರುವವರು ಮೋಜು ಮಸ್ತಿಯಲ್ಲಿ ಮೈ ಮರೆಯದೇ ಒಂದಿಷ್ಟು ಎಚ್ಚರಿಕೆ ಅನುಸರಿಸಿದರೆ ಇಂತಹ ದುರ್ಘಟನೆ ನಡೆಯದಂತಾಗಬಹುದು. ಇನ್ನಾದರೂ ಆಗಮಿಸುವ ಪ್ರವಾಸಿಗರು ಎಚ್ಚೆತ್ತುಕೊಳ್ಳಬೇಕೆಂಬುದು ಎಂದಿನ ಕಳಕಳಿ.