ಶಿರಸಿ : ಈಗಿನ ಬೊಮ್ಮಾಯಿ ಸರ್ಕಾರ ಹಳೆ ಮದ್ಯವನ್ನು ಹೊಸ ಬಾಟೆಲ್ ನಲ್ಲಿ ಹಾಕಿದಂತಿದ್ದು, ಸಾರ್ವಜನಿಕರ ಸಮಸ್ಯೆಯನ್ನು ಗ್ರಹಿಸಲು ಪಂಚೇಂದ್ರಿಯಗಳೇ ಇಲ್ಲದ್ದಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಎಸ್ ಆರ್ ಪಾಟೀಲ ಆರೋಪ ಮಾಡಿದರು.
ಮಳೆಯಿಂದ ಹಾನಿಗೊಳಗಾದ ತಾಲೂಕಿನ ವಿವಿಧ ಪ್ರದೇಶಗಳಿಗೆ ಶನಿವಾರ ಭೇಟಿ ನೀಡಿ ಮಾತನಾಡಿದ ಅವರು ‘ ‘ಹೊಸ ಸರ್ಕಾರದಲ್ಲಿ ಗುಣಾತ್ಮಕ ಬದಲಾವಣೆಯೇನೂ ಕಾಣುತ್ತಿಲ್ಲ. ಜನರ ಕಣ್ಣುಕಟ್ಟಲು ಬೇರೆ ನಾಯಕರನ್ನು ಹೆಸರಿಗೆ ಮಾತ್ರ ನೇಮಿಸಿದಂತಿದೆ. ಬೇರೆ ಪಕ್ಷದಿಂದ ಶಾಸಕರನ್ನು ಸೆಳೆದು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿ ಸರ್ಕಾರ ನಡೆಸುತ್ತಿದ್ದಾರೆ.ಒಂದೆಡೆ ರಾಜ್ಯದ ರೈತರು ಮಳೆ ಹಾನಿಯಿಂದ ನಲುಗಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರುಗಳು ಕಾತೆಗಾಗಿ ಲಾಬಿಯಲ್ಲಿ ತೊಡಗಿದ್ದಾರೆ.
ಇಂತಹ ಪ್ರಜಾಪ್ರಭುತ್ವ ವಿರೋಧಿ ಕಾರ್ಯಕ್ಕೆ ಮುಂದಿನ ಚುನಾವಣೆಯಲ್ಲಿ ಇದರ ಫಲಿತಾಂಶ ಅವರಿಗೇ ಗೊತ್ತಾಗಲಿದೆ. ಮಕ್ಕಳ ಪೌಷ್ಟಿಕಾಂಶದಲ್ಲಿಯೂ ಬ್ರಷ್ಟಾಚಾರ ಮಾಡಿದವರನ್ನು ಝೀರೊ ಟ್ರಾಫಿಕ್ ನಲ್ಲಿ ಕರೆದು ಮಂತ್ರಿ ಮಾಡುತ್ತಾರೆ. ಬಿಜೆಪಿಯಲ್ಲಿ ಕಡ್ಡಿ ಎತ್ತಿ ಇಡಬೇಕಾದ್ರೂ ಹೈ ಕಮಾಂಡ್ ನಿರ್ಧಾರ ಬೇಕು ಎಂದರು.
ಜಿಲ್ಲೆಯಲ್ಲಿ ಮಳೆಯಿಂದ ಮನೆ ಕಳೆದುಕೊಂಡ ನದಿ ಪಾತ್ರದ ಜನರಿಗೆ ಎತ್ತರದ ಪ್ರದೇಶದಲ್ಲಿ ಮರುನಿವೇಶನ ಕಲ್ಪಿಸಿ ತಕ್ಷಣ ೫ ಲಕ್ಷ ಅನುದಾನ ಬಿಡುಗಡೆ ಮಾಡಿ ವಸತಿ ಯೋಜನೆಯಡಿ ಮನೆ ಮಂಜೂರಿ ಮಾಡಬೇಕು. ಶಿರಸಿ-ಸಿದ್ದಾಪುರದಲ್ಲಿ ಅತಿವೃಷ್ಟಿಯಾಗಿದ್ದು ವಾಡಿಕೆಗಿಂತ ೩೦೦ ಮಿಮೀ ಹೆಚ್ಚು ಮಳೆಯಾಗಿದ್ದು ಜನಜೀವನದ ಮೇಲೆ ಬಹಳ ಹಾನಿಯಾಗಿದೆ. ೪ ಸಾವಿರ ಎಕರೆ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಜನರ ನೆರವಿಗೆ ಧಾವಿಸಬೇಕು. ಜಿಲ್ಲೆಯಲ್ಲಿ ಸುಮಾರು ೨ ಸಾವಿರ ಮನೆಗಳು ಹಾನಿಗೊಳಗಾಗಿವೆ. ಸೂರು ಕಳೆದುಕೊಂಡ ಜನರಿಗೆ ನಿವೇಶನ ಒದಗಿಸಿ ತಕ್ಷಣದಲ್ಲಿ ೫ ಲಕ್ಷ ಹಣ ಬಿಡುಗಡೆ ಮಾಡಿ ಮನೆ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.
ಬಸವರಾಜ ಬೊಮ್ಮಾಯಿ ಸರ್ಕಾರ ಹನಿಮೂನ್ ನಲ್ಲಿದೆ. ಬಹಳಷ್ಟು ಶಾಸಮರಿಗೆ ಮಂತ್ರಿ ಸ್ಥಾನ ಸಿಗಲಿಲ್ಲ ಎಂಬ ಉರಿಯಿದೆ. ಜನ ನೆರೆಯಿಂದ ಮನೆ ಕಳೆದುಕೊಂಡು ಸಂಕಷ್ಟದಲ್ಲಿದ್ದರೂ ಬಿಜೆಪಿಯವರು ಮಂತ್ರಿ ಸ್ಥಾನದ ಕಿತ್ತಾಟದಲ್ಲಿ ತೊಡಗಿದ್ದಾರೆ. ಬಿಜೆಪಿ ಒಡೆದ ಮನೆಯಾಗಿದೆ ಎಂದರು.
ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ, ಶಿರಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ, ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಬಸವರಾಜ ದೊಡ್ಮನಿ , ಪ್ರಮುಖರಾದ ದೀಪಕ ದೊಡ್ಡೂರ, ಎಸ್.ಕೆ.ಭಾಗ್ವತ್, ವೆಂಕಟೇಶ ಹೆಗಡೆ, ಕುಮಾರ ಜೋಶಿ, ಗೀತಾ ಶೆಟ್ಟಿ ಉಪಸ್ಥಿತರಿದ್ದರು.