ಕಾರವಾರ: ಮತ್ತೊಮ್ಮೆ ಸಚಿವರಾದ ಮೇಲೆ ಕಾರವಾರದಲ್ಲಿ ಉಸ್ತುವಾರಿ ಸಭೆಗೆ ಆಗಮಿಸಿರುವ ಕಾರ್ಮಿಕ ಸಚಿವ ಹೆಬ್ಬಾರ್ ತಮಗೆ ನೀಡಿರುವ ಸಚಿವ ಸ್ಥಾನದ ಕುರಿತು ಸಂತೃಪ್ತಿ ಇದೆ ಎಂದು ಹೇಳಿದ್ದಾರೆ.
ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರುನಾನು ಕೇಳಿದ ಖಾತೆಯನ್ನೇ ಮುಖ್ಯಮಂತ್ರಿಗಳು ನೀಡಿದ್ದಾರೆ. ಈ ಕುರಿತು ನನಗೆ ಸಂತೃಪ್ತಿಯಿದೆ. ಮುಖ್ಯಮಂತ್ರಿಗಳು ಕೊಟ್ಟ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುತ್ತೇವೆ, ಸರ್ಕಾರಕ್ಕೆ ಪಕ್ಷಕ್ಕೆ ಗೌರವ ತರುವಂತೆ ಕೆಲಸ ಮಾಡುತ್ತೇವೆ. ಕ್ಯಾಬಿನೆಟ್ ಹಂಚಿಕೆಯ ಕುರಿತು ಯಾರಿಗೂ ಅಸಮಾಧಾನ ಇಲ್ಲ ಎಂದು ಅವರು ಹೇಳಿದರು.
ಶಾಸಕನಾದ ಪ್ರತಿಯೊಬ್ಬನಿಗೂ ಸಚಿವನಾಗಬೇಕೆನ್ನುವ ಆಕಾಂಕ್ಷೆ ಇರುತ್ತದೆ. ಆದರೆ ಖಾತೆ ಹಂಚಿಕೆಯಲ್ಲಿ ಎಲ್ಲರನ್ನೂ ಸಮಾಧಾನ ಪಡಿಸಲು ಸಾಧ್ಯವಿಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.
ಕಾರ್ಯಕರ್ತನಾದವನಿಗೆ ಶಾಸಕನಾಗಬೇಕು, ಶಾಸಕನಾದವನಿಗೆ ಮಂತ್ರಿಯಾಗಬೇಕು, ಮಂತ್ರಿಯಾದವನಿಗೆ ಮುಖ್ಯಮಂತ್ರಿ ಸ್ಥಾನ ಬೇಕು ಎಂಬ ಆಸೆ ಇರುವುದು ಸಹಜ. ಪ್ರತಿಯೊಬ್ಬ ಸಚಿವ ಸ್ಥಾನದ ಆಕಾಂಕ್ಷಿಗೂ ಇಂಥದ್ದೇ ಸಚಿವ ಸ್ಥಾನ ಬೇಕು ಎಂಬ ಬೇಡಿಕೆ ಇರುತ್ತದೆ. ಆದರೆ ಎಲ್ಲರ ಬೇಡಿಕೆಗಳನ್ನೂ ಈಡೇರಿಸುವುದು ಸಾಧ್ಯವಿಲ್ಲ, ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿರುವವರಿಗೆ ಮಾತ್ರ ಅದರ ಕಷ್ಟ ಗೊತ್ತಿರುತ್ತದೆ ಎಂದರು.