ಶಿರಸಿ: ಜೀವಜಲ ಕಾರ್ಯಪಡೆ ಶಿರಸಿ ವತಿಯಿಂದ ತಾಲೂಕಿನ ನೆರೆಪೀಡಿತ ಪ್ರದೇಶಗಳಿಗೆ ಸಹಾಯ ಒದಗಿಸಲಾಗಿದೆ.
ಕಾರ್ಯಪಡೆ ವತಿಯಿಂದ ಭೂಕುಸಿತದಿಂದಾಗಿ ರಸ್ತೆ ಸಂಪರ್ಕ ಕಳೆದುಕೊಂಡಿರುವ ಗೋಳಿ ಸಮೀಪದ ಬಾವಿಕೈ, ಕೂಡ್ಮನೆ ಹಾಗೂ ನಾಡ್ಗುಳಿ ಗ್ರಾಮಗಳ ರಸ್ತೆಯನ್ನು ಜೆಸಿಬಿ, ಹಿಟಾಚಿಗಳನ್ನು ಬಳಸಿ ಖುಲ್ಲಾಪಡಿಸಿಕೊಡಲಾಯಿತು.
ಹಾಗೂ ಮನೆಕಳೆದುಕೊಂಡಿರುವ ಸತ್ಯನಾರಾಯಣ ಗಣಪ ಗೌಡ ಎನ್ನುವವರಿಗೆ ಮನೆಕಟ್ಟಲು ಅಗತ್ಯವಿರುವ ಜಿಂಕ್‌ಶೀಟ್ ಗಳನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿ ಸಾಂತ್ವನ ಹೇಳಲಾಯಿತು.
ಹಲಸಗಿ ಗ್ರಾಮದ ರಾಮಚಂದ್ರ ಭಟ್ ಅವರ ಮನೆಯಲ್ಲಿ ಧರೆ ಕುಸಿತದಿಂದಾಗಿ ಆದ ಹಾನಿಯನ್ನಿ ಪರಿಶೀಲಿಸಿ ಅಗತ್ಯ ನೆರವಿನ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್, ವಿ.ಪಿ.ಹೆಗಡೆ ವೈಶಾಲಿ, ಎಂ.ಎಂ.ಭಟ್, ಅನಿಲ್ ನಾಯ್ಕ್, ಶ್ರೀಕಾಂತ ಭಟ್ ಮುಂತಾದವರು ಉಪಸ್ಥಿತರಿದ್ದರು.