ಕಾರವಾರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾ ಆಟೋ ಚಾಲಕ – ಮಾಲೀಕರ ಸಂಘದಿಂದ ಜಿಲ್ಲಾಧಿಕಾರಿ ಕಛೇರಿಯ ಎದುರು ಪ್ರತಿಭಟನೆ ನಡೆಸಲಾಯಿತು.
ಕೊರೊನಾ ಸಂಕಷ್ಟದ ಅವಧಿಯಲ್ಲಿ ಸರ್ಕಾರದ ವತಿಯಿಂದ ವಿವಿಧ ಕಾರ್ಮಿಕವರ್ಗದವರಿಗೆ ಸಹಾಯ ನೀಡಲಾಗಿದೆ. ಆದರೆ ಆಟೋಚಾಲಕರಿಗೆ ಯಾವುದೇ ಸಹಾಯ ಘೋಷಿಸಲಾಗಿಲ್ಲ.
ಹಲವು ಕಾರ್ಮಿಕರಿಗೆ ಲಾಕ್ ಡೌನ್ ನಲ್ಲಿಯೂ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ರಿಕ್ಷಾ ಚಾಲಕರು ಆಟೋವನ್ನು ನಿಲ್ಲಿಸಿ ಪರದಾಡುವಂತಾಗಿತ್ತು. ಸಹಾಯಧನ ಕೆಲವೇ ಆಟೋಚಾಲಕರಿಗೆ ಸಿಕ್ಕಿದ್ದು ಇನ್ನೂ ಅರ್ಧದಷ್ಟು ಮಂದಿಗೆ ಸಿಕ್ಕಿಲ್ಲ ಈ ಕೂಡಲೆ ಅವರಿಗೆ ಸಹಾಯಧನ ದೊರಕಿಸಿಕೊಡಬೇಕು.
ಅಲ್ಲದೇ ದಿನದಿಂದ ದಿನಕ್ಕೆ ಗ್ಯಾಸ್ ಬೆಲೆ ಏರಿಕೆಯಾಗುತ್ತಿರುವುದರಿಂದ ಆಟೊಚಾಲಕರಿಗೆ ರಿಕ್ಷಾ ನಡೆಸುವುದು ಕಷ್ಟವಾಗುತ್ತಿದೆ. ಸರ್ಕಾರ ಈ ಕುರಿತು ಗಮನ ಹರಿಸಬೇಕು.
ಮತ್ತು ಆಟೋ ಚಾಲಕರನ್ನೂ ಕೂಡ ಕಾರ್ಮಿಕ ಇಲಾಖೆಯ ವ್ಯಾಪ್ತಿಗೆ ಸೇರಿಸಿ ಸರ್ಕಾರಿ ಸೌಲಭ್ಯಗಳು ದೊರಕುವಂತೆ ಮಾಡಬೇಕು, ಹಾಗೂ ರಾಜ್ಯಾದ್ಯಂತ ಎಲೆಕ್ಟ್ರಿಕ್ ಬೈಕ್ ಹಾಗೂ ಟ್ಯಾಕ್ಸಿ ಯೋಜನೆಯನ್ನು ಸರ್ಕಾರ ಕೈ ಬಿಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘದ ವಿವಿಧ ಪದಾಧಿಕಾರಿಗಳು ಸೇರಿದಂತೆ 100 ಕ್ಕೂ ಹೆಚ್ಚು ಆಟೋ ಚಾಲಕರು ಉಪಸ್ಥಿತರಿದ್ದರು