ಬೆಂಗಳೂರು: ಜಿಲ್ಲೆಯಲ್ಲಿ ಕಗ್ಗಂಟಾಗಿದ್ದ ಅರಣ್ಯವಾಸಿಗಳ ಸಮಸ್ಯೆಗೆ ಕೊನೆಗೂ ಪರಿಹಾರ ದೊರಕಿದ್ದು ಶಿರಸಿ ಶಾಸಕ ಹಾಗೂ ಹಾಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಆ ಮೂಲಕ ಬಹುಕಾಲದ ಸಮಸ್ಯೆಗೆ ಮುಕ್ತಿ ಸಿಕ್ಕಿದೆ.
ಸರ್ಕಾರದ ಹೊಸ ಆದೇಶದ ಪ್ರಕಾರ ಅರಣ್ಯಪ್ರದೇಶದಲ್ಲಿ ವಾಸಿಸುತ್ತಿರುವ ಈಗಾಗಲೇ ಪಂಚಾಯತ್ ಮನೆ ನಂಬರ್ ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಸೌಲಭ್ಯ ಪಡೆಯುತ್ತಿರುವವರಿಗೆ ಸರ್ಕಾರದ ವಸತಿ ಯೋಜನೆಯ ಮೂಲಕ ನೆರವು ಪಡೆದು ಮನೆಕಟ್ಟಿಕೊಳ್ಳಲು ಅನುಕೂಲವಾಗಲಿದೆ.
ಹಲವಾರು ವರ್ಷಗಳಿಂದ ಅರಣ್ಯ ಸಾಗುವಳಿ ಮಾಡಿಕೊಂಡು ಅಲ್ಲಿಯೇ ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದ ಬಡವರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದರು. ಈಗ ಅರಣ್ಯ ಪ್ರದೇಶದಲ್ಲಿ ಹಳೆಯ ಗುಡಿಸಲಿದ್ದರೂ ವಸತಿ ಯೋಜನೆಯಡಿ ಅರಣ್ಯವಾಸಿಗಳು ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ ಎಂದು ಸರ್ಕಾರ ನೂತನ ಆದೇಶ ಮಾಡಿದೆ.
ಹಲವು ವರ್ಷಗಳಿಂದ ಅತಿಕ್ರಮಣದಾರರ ಸಮಸ್ಯೆ ನೆನೆಗುದಿಗೆ ಬಿದ್ದು ವಿಶೇಷವಾಗಿ ಉತ್ತರಕನ್ನಡದಲ್ಲಿ ಈ ಸಮಸ್ಯೆ ಕಗ್ಗಂಟಾಗಿ ಪರಿಣಮಿಸಿತ್ತು. ಪ್ರಸ್ತುತ ಶಿರಸಿ- ಸಿದ್ದಾಪುರ ಕ್ಷೇತ್ರದ ಶಾಸಕರಗಿರುವ ಹಾಲಿ ವಿಧಾನ ಸಭೆಯ ಸ್ಪೀಕರ್ ಆದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಪ್ರಯತ್ನದಿಂದಾಗಿ ಈ ಸಮಸ್ಯೆಗೆ ಪರಿಹಾರ ದೊರಕಿದೆ.
ಅತಿಕ್ರಮಣದಾರರ ಪರವಾಗಿ ಧ್ವನಿ ಎತ್ತಿದ ಕಾಗೇರಿ ವಸತಿ ಯೋಜನೆಗಳಲ್ಲಿ ಅರಣ್ಯವಾಸಿಗಳಿಗೆ ಆಗುತ್ತಿರುವ ಅನ್ಯಾಯದ ಕುರಿತು ಸರ್ಕಾರಕ್ಕೆ ಮನದಟ್ಟು ಮಾಡಿಸಿಕೊಟ್ಟು ಸರ್ಕಾರದ ಗಮನ ಸೆಳೆಯುವಲ್ಲಿ ಸಫಲರಾಗಿದ್ದು ಈ ಕುರಿತು ಪರಿಷ್ಕೃತ ಆದೇಶ ಹೊರಡಿಸುವಲ್ಲಿ ಯಶಸ್ವಿಯಾಗಿದ್ದಾರೆ.