ಮುಂಡಗೋಡ: ಗದ್ದೆಗೆ ಹೊರಟಿದ್ದ ಮಹಿಳೆಯೊಬ್ಬಳ ಮೇಲೆ ಚಿರತೆ ದಾಳಿ ಮಾಡಿದ್ದು, ಕುಡಗೋಲಿನಿಂದ ಚಿರತೆಗೆ ಹೊಡೆದು, ದಾಳಿಯಿಂದ ತಪ್ಪಿಸಿಕೊಂಡು ಮನೆ ಸೇರಿದ ಘಟನೆ ತಾಲೂಕಿನ ಇಂದೂರ ಗ್ರಾಮದ ಸಂಜಯನಗರದ ಸಮೀಪ ಅರಣ್ಯದಲ್ಲಿ ಜರುಗಿದೆ.
ಇಂದೂರ ಗ್ರಾಮದ ಗೀತಾ ದೊಡ್ಡಮನಿ ಎಂಬ ಮಹಿಳೆ ಚಿರತೆ ದಾಳಿಗೆ ಒಳಗಾದವಳು. ತಮ್ಮ ಗದ್ದೆಯ ಕೆಲಸಕ್ಕೆಂದು ಕೈಯಲ್ಲಿ ಕುಡುಗೋಲು ಹಿಡಿದು ಹೊರಟಿದ್ದ ಮಹಿಳೆಯ ಮೇಲೆ ಸಂಜಯನಗರದ ಹತ್ತಿರದ ಅರಣ್ಯ ಪ್ರದೇಶದಲ್ಲಿ ಚಿರತೆ ಏಕಾಏಕಿ ದಾಳಿ ಮಾಡಿದೆ. ಮಹಿಳೆಯು ಚಿರತೆಯಿಂದ ತನ್ನ ರಕ್ಷಣೆಗಾಗಿ ಜೋರಾಗಿ ಚಿರಾಡಲು ಆರಂಭಿಸಿದ್ದಾಳೆ.
ರಕ್ಷಣೆಗೆ ಯಾರು ಇಲ್ಲವಾದಾಗ ಚಿರತೆ ದಾಳಿ ಮಾಡಿ ಮಹಿಳೆಯ ಮುಖದ ಭಾಗಕ್ಕೆ ಗಾಯಗೊಳಿಸಿದೆ. ನಂತರ ಮೈ ಮೇಲೆ ಮತ್ತೆ ದಾಳಿ ಮಾಡಲು ಮುಂದಾಗಿದೆ. ಕೈಯಲ್ಲಿ ಕುಡುಗೊಲು ಇರುವುದರಿಂದ ತನ್ನ ರಕ್ಷಣೆ ಮಾಡಿಕೊಳ್ಳಲು ಕುಡುಗೊಲಿನಿಂದ ಚಿರತೆಯನ್ನು ಹೊಡೆಯಲು ಮುಂದಾದಾಗ ಚಿರತೆ ಓಡಿ ಹೋಗಿದೆ ಎಂದು ಗಾಯಾಳು ಮಹಿಳೆ ಹೇಳಿದಳು.
ಗಾಯಾಳು ಮಹಿಳೆಯನ್ನು ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಒಂದು ವಾರದ ಹಿಂದೆ ಚಿರತೆ ತನ್ನ ಎರಡು ಮರಿಗಳೊಂದಿಗೆ ಪ್ರತ್ಯೇಕವಾಗಿದ್ದನ್ನು ಸಾರ್ವಜನಿಕರು ಹೇಳಿದ್ದರು. ಆದರು ಅರಣ್ಯ ಇಲಾಖೆಯವರು ಚಿರತೆ ಇರುವ ಬಗ್ಗೆ ಯಾವುದೆ ಮಾಹಿತಿ ದೊರೆತಿಲ್ಲಾ ಎಂದು ಹೇಳಿದ್ದರು. ಇನ್ನೂ ಮುಂದಾದರು ಅರಣ್ಯ ಇಲಾಖೆ ಕ್ರಮಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.