ಸಿದ್ದಾಪುರ: ಮಹಾಮಳೆ ಹಾಗೂ ಪ್ರವಾಹಕ್ಕೆ ಸಿದ್ದಾಪುರ ತಾಲೂಕಿನ ಕಾನಸೂರು ಪಂಚಾಯತಿ ವ್ಯಾಪ್ತಿಯ ಶೇಡಿ ದಂಟಕಲ್ ಗ್ರಾಮದಲ್ಲಿ ಗುಡ್ಡ ಕುಸಿದು ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಕಳೆದ 12 ದಿನಗಳಿಂದ ಜನಸಾಮಾನ್ಯರು ಸಂಚಾರ ಮಾಡಲು ತೀವ್ರ ಅಡಚಣೆ ಉಂಟಾಗಿತ್ತು.
ಆ.3 ರಂದು ಕಾನಸೂರಿಗೆ ಪ್ರವಾಹೋತ್ತರ ಪರಿಸ್ಥಿತಿ ವೀಕ್ಷಣೆಗೆ ಆಗಮಿಸಿದ್ದ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರನ್ನು ಭೇಟಿ ಮಾಡಿದ್ದ ಶೇಡಿ ದಂಟಕಲ್ ಹಾಗೂ ಹೊಸ್ಮನೆ ಗ್ರಾಮದ ನಾಗರಿಕರು ರಸ್ತೆ ತೆರವು ಮಾಡಿ ತಾತ್ಕಾಲಿಕವಾಗಿ ಲಘು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದ್ದರು.
ಈ ವೇಳೆ ಖಡಕ್ ಆದೇಶ ನೀಡಿದ್ದ ಜಿಲ್ಲಾಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದರು. ಅವರ ಆದೇಶಕ್ಕೆ ಸ್ಪಂದಿಸಿದ ಅಧಿಕಾರಿಗಳು 48 ತಾಸುಗಳ ಒಳಗೆ ರಸ್ತೆ ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಜಿಲ್ಲಾಧಿಕಾರಿಗಳು, ಪಿಎಂಜಿಎಸ್ವೈ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ತ್ವರಿತ ಸ್ಪಂದನೆಗೆ ಶೇಡಿ ದಂಟಕಲ್ ಹಾಗೂ ಹೊಸ್ಮನೆ ಊರಿನ ನಾಗರಿಕರು ಹರ್ಷ ವ್ಯಕ್ತಪಡಿಸಿ ಧನ್ಯವಾದ ಸಲ್ಲಿಸಿದ್ದಾರೆ.