
ಕುಮಟಾ: ಕೂಲಿ ಆಳು ಕೊರತೆ ಮತ್ತು ಯುವಕರು ಕೃಷಿಯಿಂದ ವಿಮುಖರಾಗುತ್ತಿರುವ ಇಂದಿನ ದಿನಗಳಲ್ಲಿ ರೈತರು ಕೃಷಿ ಚಟುವಟಿಕೆಗಳಿಗೆ ಯಂತ್ರೋಪಕರಣಗಳನ್ನು ಬಳಸಿ ಹೆಚ್ಚಿನ ಆದಾಯ ಪಡೆಯಬಹುದಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆತ್ಮಯೋಜನೆ ಸಲಹಾ ಸಮಿತಿಯ ಅಧ್ಯಕ್ಷ ನಾರಾಯಣ ಹೆಗಡೆ ಕರಿಕಲ್ಲು ಅಭಿಪ್ರಾಯಪಟ್ಟರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಕೃಷಿ ಇಲಾಖೆ ಅಂಕೋಲಾ ಇವರ ಸಂಯುಕ್ತಾಶ್ರಯದಲ್ಲಿ ಹಿಲ್ಲೂರು ಗ್ರಾಮದ ಮಾಗೋಡ ನಾರಾಯಣ ಹರಿಕಾಂತ ಅವರ ಮನೆಯಲ್ಲಿ ನಡೆದ ಯಾಂತ್ರೀಕೃತ ಭತ್ತ ಬೇಸಾಯ ಮಾಡಿದ ಫಲಾನುಭವಿಗಳಿಗೆ ಇಲಾಖೆಯ ವತಿಯಿಂದ ಕೋನೋವೀಡರ್ ವಿತರಣೆ ಹಾಗೂ ನಿರ್ವಹಣೆ ಮಾಡುವ ವಿಧಾನದ ಬಗ್ಗೆ ಹಮ್ಮಿಕೊಂಡ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯಾಂತ್ರೀಕೃತ ಭತ್ತ ಬೇಸಾಯದಲ್ಲಿ ಕಳೆ ನಿರ್ವಹಣೆ ಮಾಡುವುದು ಹಾಗೂ ಅಧಿಕ ಇಳುವರಿಯನ್ನು ಪಡೆಯಲು ಕೋನೋವೀಡರ್ ಹೊಡೆಯುವುದು ಅತೀ ಮುಖ್ಯವಾಗಿರುತ್ತದೆ ಎಂದು ತಿಳಿಸಿದ ಅವರು ಭವಿಷ್ಯದಲ್ಲಿ ಭತ್ತ ಬೆಳೆಯುವರರ ಸಂಖ್ಯೆ ತೀರ ಇಳಿಮುಖವಾಗುತ್ತಿರುವುದು ಕಳವಳಕಾರಿಯಾಗಿದೆ. ಅದನ್ನು ಮನಗಂಡ ಧರ್ಮಸ್ಥಳದ ಧರ್ಮಾಧಿಕಾರಿಗಳು ಕೃಷಿ ಯಂತ್ರಧಾರೆಯ ಮೂಲಕ ರೈತರಿಗೆ ಉಪಯುಕ್ತ ಯಂತ್ರಗಳನ್ನು ನೀಡಿ, ಕೃಷಿ ಕೆಲಸವನ್ನು ಸರಳೀಕರಣಗೊಳಿಸಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಯೋಜನೆಯ ಕೃಷಿ ಮೇಲ್ವಿಚಾರಕ ಸಂತೋಷಕುಮಾರ ಮಾತನಾಡಿ, ಕೃಷಿ ಭೂಮಿಗೆ ನಿರಂತರ ಭೇಟಿ ನೀಡುತ್ತ, ಭೂಮಿ ತಾಯಿ ಜೊತೆಗೆ ಪ್ರೀತಿಯಿಂದ ಸಲುಗೆ ಬೆಳೆಸಿಕೊಂಡಲ್ಲಿ ಕೃಷಿ ಹಾಗೂ ಮನುಷ್ಯನ ನಡುವೆ ಹೆಚ್ಚಿನ ಸಂಬಂಧ ಬೆಳೆಯುತ್ತವೆ. ಆಗ ಮಾತ್ರ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಿದ್ದು, ಆ ದಿಸೆಯಲ್ಲಿ ಕೃಷಿ ಭೂಮಿಯಲ್ಲಿ ಆಸಕ್ತಿಯಿಂದ ಕೆಲಸ ನಿರ್ವಹಿಸಬೇಕು ಎಂದು ಕರೆ ನೀಡಿದರು. ಕೃಷಿ ಇಲಾಖೆಯ ತಾಂತ್ರಿಕ ಸಹಾಯಕ ಕಿರಣ ಎಚ್. ಕೃಷಿ ಇಲಾಖೆಯ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು.
ಹಿಲ್ಲೂರು ಒಕ್ಕೂಟದ ಅಧ್ಯಕ್ಷ ನಿರಂಜನ ನಾಯಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಹನುಮಂತ ಶೆಟ್ಟಿ, ನಾರಾಯಣ ಹರಿಕಾಂತ ಇದ್ದರು. ಕೃಷಿ ಇಲಾಖೆಯ ಕವಿತಾ ಗೌಡ ಸ್ವಾಗತಿಸಿದರು. ಬಳಲೆ ಕೃಷಿ ಯಂತ್ರಧಾರೆಯ ಪ್ರಬಂಧಕ ಕೃಷ್ಣಮೂರ್ತಿ ಎನ್. ನಿರ್ವಹಿಸಿದರು. ಸಂಜಯ ಗೌಡ ವಂದಿಸಿದರು