ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ಕುಸ್ತಿಯ ಪುರುಷರ 57 ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ 23 ವರ್ಷದ ರವಿ ದಹಿಯಾ ಬೆಳ್ಳಿಯನ್ನು ಗೆದ್ದಿದ್ದಾರೆ. ಈ ಮೂಲಕ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಎರಡನೇ ಬೆಳ್ಳಿ ಪದಕ ತಂದುಕೊಟ್ಟಿದ್ದಾರೆ.
ಎರಡು ಬಾರಿ ವಿಶ್ವಚಾಂಪಿಯನ್ ರಷ್ಯಾದ ಚೌರ್ ಉಗುವೆವ್ ವಿರುದ್ಧ 4-7 ಅಂಕಗಳಿಂದ ರವಿ ದಹಿಯಾ ಸೋತು ಎರಡನೇ ಸ್ಥಾನ ಪಡೆದರು. ಸೆಮಿಫೈನಲ್‍ನಲ್ಲಿ ಕಝಖಿಸ್ತಾನದ ನುರಿಸ್ಲಾಮ್ ಸನಯೆವ್ ವಿರುದ್ಧ ಆರಂಭಿಕ ಹಿನ್ನಡೆ ಅನುಭವಿಸಿದರೂ ಕೊನೆ ಕ್ಷಣದಲ್ಲಿ ಭರ್ಜರಿ ಪ್ರದರ್ಶನದ ಮೂಲಕ ರವಿ ದಹಿಯಾ ರೋಚಕ ಗೆಲುವಿನೊಂದಿಗೆ ಫೈನಲ್ ಪ್ರವೇಶಿಸಿದ್ದರು. ರಷ್ಯಾದ ಚೌರ್ ಉಗುವೆವ್ ಸತತ 16 ಪಂದ್ಯಗಳನ್ನು ಗೆದ್ದು ಒಲಿಂಪಿಕ್ಸ್ ಪ್ರವೇಶಿಸಿದ್ದರು.
ಹರಿಯಾಣದ ಸೋನಿಪತ್ ಜಿಲ್ಲೆಯ ನಹಿ ಗ್ರಾಮದಲ್ಲಿ ಜನಿಸಿದ ರವಿ ದಹಿಯಾ ಈ ಹಿಂದೆ 2019ರ ವಿಶ್ವ ಚಾಂಪಿಯನ್‍ಷಿಪ್‍ನ 57 ಕೆಜಿ ವಿಭಾಗದಲ್ಲಿ ಕಂಚು, 2020ರ ಏಷ್ಯನ್ ಚಾಂಪಿಯನ್‍ಷಿಪ್‍ನಲ್ಲಿ ಚಿನ್ನ, 2021ರ ಏಷ್ಯನ್ ಚಾಂಪಿಯನ್‍ಷಿಪ್‍ನಲ್ಲಿ ಸ್ವರ್ಣ, 2018ರ ಅಂಡರ್ 23 ಚಾಂಪಿಯನ್‍ಷಿಪ್‍ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದರು.