
ಶಿರಸಿ: ಭಾರೀ ಮಳೆಯಿಂದಾಗಿ ತಾಲೂಕಿನ ಮತ್ತೀಘಟ್ಟ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದು ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈಮುಹಿಲನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅವರು ಮಂಗಳವಾರ ಮತ್ತೀಘಟ್ಟ ಕೆಳಗಿನ ಕೇರಿಯ ಉಂಬಳ ಕೇರಿ, ಮಾಡನ್ಮನೆ, ಸಿದ್ಧಿ ಕಾಲೋನಿಯಲ್ಲಿ ಸಂಭವಿಸಿದ ರಸ್ತೆಕುಸಿತದ ಪರಿಶೀಲನೆ ನಡೆಸಿದರು.ಭೂ ಕುಸಿತದಿಂದ ನಾಶವಾದ ಕೆಳಗಿನ ಕೇರಿ ಕಲಗದ್ದೆಯ ಚಂದ್ರಶೇಖರ ಹೆಗಡೆಯವರ ತೋಟದ ಪರಿವೀಕ್ಷಣೆ ನಡೆಸಿದರು.
ನಂತರ ತಾಲೂಕಿನ ರೇವಣಕಟ್ಟಾ ಭಾಗದಲ್ಲಿ ಮಳೆಯಿಂದಾಗಿ ಕುಸಿದು ಬಿದ್ದ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಹಾಗೂ ತಕ್ಷಣವೇ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸಿಬ್ಬಂದಿಗಳಿಗೆ ಆದೇಶ ನೀಡಿದರು ಮತ್ತು ಮನೆ ಹಾಗೂ ತೋಟ ನಾಶವಾಗಿರುವ ಕುರಿತು ಸಮಗ್ರ ಮಾಹಿತಿ ಕಲೆಹಾಕುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತೆ ಆಕೃತಿ ಬನ್ಸಾಲ್, ತಹಶೀಲ್ದಾರ್ ಎಂ.ಆರ್.ಕುಲಕರ್ಣಿ, ಮುಂಡಗನಮನೆ ಸೊಸೈಟಿ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.