
ನವದೆಹಲಿ: ರಾಜ್ಯ ಸರ್ಕಾರಗಳು ಪ್ರಧಾನ ಮಂತ್ರಿ ಬೆಳೆ ವಿಮಾ ಯೋಜನೆ ಅಡಿ ಬೆಳೆ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ಒದಗಿಸಲು ತಮ್ಮದೇ ಬೆಳೆ ವಿಮಾ ಕಂಪನಿ ಸ್ಥಾಪಿಸಲು ಮಾರ್ಗಸೂಚಿಯಲ್ಲಿ ಕೇಂದ್ರ ಸರ್ಕಾರ ಅವಕಾಶ ನೀಡಿದೆ ಎಂದು ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವ ಕೈಲಾಶ್ ಚೌಧರಿ ತಿಳಿಸಿದ್ದಾರೆ.
ಒಂದು ವೇಳೆ ನಿಗದಿತ ಗಡುವಿನೊಳಗೆ ಬ್ಯಾಂಕ್‍ಗಳು ಕಂಪನಿಗಳಿಗೆ ಹಣ ಪಾವತಿಸದೇ ಹೋದರೆ, ಅದರ ಪೂರ್ಣ ಜವಾಬ್ದಾರಿ ಬ್ಯಾಂಕ್‍ಗಳ ಮೇಲೆ ಬೀಳುತ್ತದೆ. ಇದರಿಂದ ರೈತರಿಗೆ ತೊಂದರೆ ಆಗುವುದಿಲ್ಲ ಎಂದು ಹೇಳಿದರು. ಬೆಳೆ ವಿಮೆ ವಿಚಾರದಲ್ಲಿ ರಾಜ್ಯ ಸರ್ಕಾರ ಮತ್ತು ವಿಮಾ ಕಂಪನಿಗಳು ಬೆಳೆ ಹಾನಿಯ ಲೆಕ್ಕ ಹಾಕಿದ ತರುವಾಯ ಪರಿಹಾರ ಪಾವತಿಸುತ್ತಿವೆ. ಕೇಂದ್ರ ಸರ್ಕಾರ ವಿಮೆಗಾಗಿ ತನ್ನ ಪಾಲಿನ ಕಂತಿನ ಹಣ ನೀಡುತ್ತಿದೆ ಎಂದು ವಿವರಿಸಿದರು.
ರೈತ ಉತ್ಪನ್ನ ಸಂಘಗಳ ಕುರಿತಂತೆ ಮಾತನಾಡಿದ ಅವರು, ರೈತರ ಆದಾಯ ದುಪ್ಪಟ್ಟು ಮಾಡುವಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ. ಹಿಂದೆ 1000 ರೈತರು ಸೇರಿ ಸಂಘ ರಚಿಸಬೇಕಾಗಿತ್ತು. ಆದರೆ ಈಗ ಸಣ್ಣ ಮತ್ತು ಅತಿ ಸಣ್ಣ ರೈತರ ಅನುಕೂಲಕ್ಕಾಗಿ 300 ರೈತರು ಸೇರಿ ಸಂಘ ನೋಂದಾಯಿಸಿದರೂ ಸೌಲಭ್ಯ ದೊರೆಯುತ್ತದೆ ಎಂದರು.
ಈ ನಡುವೆ ಪ್ರಶ್ನೊತ್ತರ ಕಲಾಪಕ್ಕೆ ಕೆಲವು ಪ್ರತಿಪಕ್ಷ ಸದಸ್ಯರು ಅಡ್ಡಿ ಪಡಿಸಿದಾಗ, ಮಧ್ಯಪ್ರವೇಶಿಸಿದ ಸ್ಪೀಕರ್, ರೈತರ ಬಗ್ಗೆ ಮಹತ್ವದ ಚರ್ಚೆ ನಡೆಯುತ್ತಿದ್ದು, ರೈತರ ಸಮಸ್ಯೆಗೆ ಪರಿಹಾರ ಒದಗಿಸಬೇಕಾಗಿದೆ. ಸುಗಮ ಕಲಾಪಕ್ಕೆ ಅವಕಾಶ ನೀಡಿ, ಸಂಸದೀಯ ಪರಂಪರೆಗೆ ಅವಮಾನ ಮಾಡಬೇಡಿ ಎಂದು ಮನವಿ ಮಾಡಿದರು. ಆದರೆ ಸದಸ್ಯರು ಘೋಷಣೆ ಮುಂದುವರಿಸಿದಾಗ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.
ನ್ಯೂಸ್ 13