
ಯಲ್ಲಾಪುರ: ಭೂಕುಸಿತದಂತಹ ಘಟನೆಗಳು ಅತ್ಯಂತ ಗಂಭೀರ ವಿಷಯವಾಗಿದ್ದು ಇದು ದೇಶ ಮಟ್ಟದ ವಿಪತ್ತು ಎಂದು ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತಹೆಗಡೆ ಅಶೀಸರ ಹೇಳಿದರು.
ಪಟ್ಟಣದ ತಾ.ಪಂ. ಸಭಾಭವನದಲ್ಲಿ ಮಂಗಳವಾರ ನಡೆದ ಜೀವವೈವಿಧ್ಯತೆ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು ಕಳೆದ ಕೆಲವು ವರ್ಷಗಳಿಂದ ಭೂಕುಸಿತದಂತಹ ವಿದ್ಯಮಾನಗಳು ಹೆಚ್ಚಿದ್ದು ಇದು ದೇಶಕ್ಕೆ ಒದಗಿದ ದೊಡ್ಡ ವಿಪತ್ತಾಗಿದೆ. ಈ ವರ್ಷ ಕಳಚೆಯಲ್ಲಿ ಸಂಭವಿಸಿದ ಭೂಕುಸಿತವು ಭೀಕರವಾಗಿದ್ದು ರಾಜ್ಯದಲ್ಲಿಯೇ ದೊಡ್ಡಮಟ್ಟದ ಭೂಕುಸಿತ ಯಲ್ಲಾಪುರದಲ್ಲಿ ಸಂಭವಿಸಿದೆ ಎಂದರು.
ಪರಿಸರ ವಿಜ್ಞಾನಿ ಕೇಶವ ಕೂರ್ಸೆ ಮಾತನಾಡಿ, ಪರಿಸರ ನಾಶದಿಂದಾಗಿ ಇಂತಹ ವಿಪತ್ತುಗಳು ಸಂಭವಿಸುತ್ತಿದ್ದು ಪರಿಸರದ ಮೇಲೆ ಮಾನವನ ಅತಿಯಾದ ಹಸ್ತಕ್ಷೇಪಗಳು ದುರಂತಕ್ಕೆ ಕಾರಣವಾಗಿದೆ. 2009 ರಿಂದ ರಾಜ್ಯದಲ್ಲಿ ಭೂಕುಸಿತ ಪ್ರಕರಣಗಳು ಹೆಚ್ಚಾಗಿವೆ. ಪಾರಂಪರಿಕ ಅರಣ್ಯನಾಶ, ಗಿಡ ಮರಗಳ ನಾಶದಿಂದಾಗಿ ಈ ಅವಘಡಗಳು ನಡೆಯುತ್ತಿವೆ. ಇನ್ನಾದರೂ ಎಚ್ಚೆತ್ತುಕೊಂಡು ಪರಿಸರ ಸಂರಕ್ಷಣೆಯ ಜವಾಬ್ದಾರಿ ನಿರ್ವಹಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಪಾರಂಪರಿಕ ಜೇನುತಜ್ಞ ರಾಮಾ ಮರಾಠಿಗೆ ಜೀವವೈವಿಧ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶ್ರೀಕೃಷ್ಣ ಕಾಮ್ಕರ್, ಎಸಿಎಫ಼್ ಅಶೋಕ ಭಟ್ಟ, ತಾ.ಪಂ. ಇಒ ಜಗದೀಶ ಕಮ್ಮಾರ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.