• Slide
    Slide
    Slide
    previous arrow
    next arrow
  • ‘ಅರಬೈಲ್ ಘಾಟ್’ನಲ್ಲಿ ಏಕಮುಖ ಸಂಚಾರಕ್ಕೆ ಅನುವು

    300x250 AD

    ಕಾರವಾರ: ಕಳೆದ ಒಂದು ವಾರದ ಹಿಂದೆ ಮಳೆಯ ಆರ್ಭಟಕ್ಕೆ ಹೆದ್ದಾರಿಯಲ್ಲಿ ಭೂಕುಸಿತ ಉಂಟಾದ ಪರಿಣಾಮ ಸರಕು ಸಾಗಾಟ ಲಾರಿಗಳಿಗೆ ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿಗಳಲ್ಲಿ ದಿಗ್ಭಂದನ ಹಾಕಿದಂತಾಗಿದ್ದು, ಎಲ್ಲಿಯೂ ತೆರಳಲಾಗದೇ ಸಿಲುಕಿಕೊಂಡಿದ್ದರು. ಈ ನಡುವೆ ತಮಗೆ ತೆರಳಲು ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿ ಚಾಲಕರು ಮಂಗಳವಾರ ಹೆದ್ದಾರಿಯಲ್ಲೇ ಪ್ರತಿಭಟನೆ ಕೂಡ ಮಾಡಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯಲ್ಲಿ ಜು.23ರಂದು ಸುರಿದ ಧಾರಾಕಾರ ಮಳೆಗೆ ಅಂಕೋಲಾದಿಂದ ಯಲ್ಲಾಪುರ- ಹುಬ್ಬಳ್ಳಿಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ- 63ರ ಅರಬೈಲ್ ಘಟ್ಟ ಪ್ರದೇಶದಲ್ಲಿ ಭೂಕುಸಿತ ಉಂಟಾಗಿದೆ. ಪರಿಣಾಮ ಹೆದ್ದಾರಿಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಸರಕು ಸಾಗಣೆಯ ಲಾರಿಗಳನ್ನು ಬಾಳೆಗುಳಿ ಬಳಿಯಲ್ಲಿಯೇ ತಡೆಹಿಡಿಯಲಾಗಿದೆ.

    ಇದೀಗ ಹೆದ್ದಾರಿ ಸಂಚಾರ ಸ್ಥಗಿತಗೊಂಡು ಹತ್ತು ದಿನ ಕಳೆದರೂ ಸಹ ಸರಕು ಸಾಗಾಟಕ್ಕೆ ಅವಕಾಶ ನೀಡಿಲ್ಲವಾಗಿದ್ದು, ಇದರಿಂದಾಗಿ ಲಾರಿ ಚಾಲಕರ ಪರಿಸ್ಥಿತಿ ಹದಗೆಟ್ಟಿದೆ. ಇದ್ದ ದಿನಸಿ, ಹಣದಲ್ಲಿ ಇಷ್ಟು ದಿನ ರಸ್ತೆ ಬದಿಯಲ್ಲೇ ಕಳೆದಿದ್ದು, ಇದೀಗ ಹಣವೂ ಖಾಲಿಯಾಗಿ ಊಟಕ್ಕೆ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

    ಅಲ್ಲಿನ ಪೊಲೀಸರನ್ನು ಕೇಳಿದರೆ ನಾಳೆ ಬಿಡ್ತಾರೆ, ನಾಡಿದ್ದು ಬಿಡ್ತಾರೆ ಎಂದು ಹೇಳುತ್ತಿದ್ದು, ಯಾವಾಗ ಸಂಚಾರಕ್ಕೆ ಅವಕಾಶ ನೀಡುತ್ತಾರೆ ಎನ್ನೋದು ತಿಳಿಯದೇ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಚಾಲಕರು ಅಳಲು ತೋಡಿಕೊಂಡರು.

    ಇನ್ನು ಬಾಳೆಗುಳಿಯಿಂದ ಹೆದ್ದಾರಿಯ ಉದ್ದಕ್ಕೂ ಸುಮಾರು ನಾಲ್ಕೈದು ಕಿಲೋಮೀಟರ್‌ಗಳವರೆಗೆ ಸಾವಿರಾರು ಸರಕು ಸಾಗಾಟ ಲಾರಿಗಳು ಸಾಲುಗಟ್ಟಿ ನಿಂತಿವೆ. ಅಲ್ಲದೇ ಇಲ್ಲಿನ ಟೋಲ್‌ಗೇಟ್, ಅಂಕೋಲಾ, ಕುಮಟಾದಲ್ಲೂ ಸಹ ಟ್ರಕ್‌ಗಳು ನಿಂತುಕೊಂಡಿದ್ದು, ಮುಂದೆ ಸಂಚಾರ ಯಾವಾಗ ಎನ್ನುವುದೂ ತಿಳಿಯದೇ ಚಾಲಕರುಗಳು ದಿನ ದೂಡುತ್ತಿದ್ದಾರೆ.

    ಜಿಲ್ಲೆಯಲ್ಲಿ ಸರಕು ಸಾಗಾಟ ಲಾರಿಗಳು ಸಂಚರಿಸುವ ಪ್ರಮುಖ ಮಾರ್ಗವೇ ರಾಷ್ಟ್ರೀಯ ಹೆದ್ದಾರಿ- 63 ಆಗಿದ್ದು, ಇತ್ತ ಕುಮಟಾ- ಶಿರಸಿ ರಾಜ್ಯ ಹೆದ್ದಾರಿ- 69ರಲ್ಲಿ ಅಗಲೀಕರಣ ಕಾರ್ಯ ನಡೆಯುತ್ತಿರುವುದರಿಂದ ಆ ಮಾರ್ಗದಲ್ಲೂ ಲಾರಿಗಳ ಸಂಚಾರಕ್ಕೆ ಉತ್ತಮವಾಗಿಲ್ಲ.

    300x250 AD

    ಅಲ್ಲದೇ ಕಾರವಾರ, ಜೋಯಿಡಾ- ಬೆಳಗಾವಿ ಹೆದ್ದಾರಿಯ ಅಣಶಿ ಘಟ್ಟದಲ್ಲೂ ಭೂಕುಸಿತ ಉಂಟಾಗಿರುವುದಿಂದ ಸಂಚಾರಕ್ಕೆ ಪರ್ಯಾಯ ಮಾರ್ಗವಿಲ್ಲದೇ ಸರಕು ಸಾಗಾಟಕ್ಕೆ ಅಡ್ಡಿಯುಂಟಾದಂತಾಗಿದೆ. ಸಾಕಷ್ಟು ದಿನ ಸರಕು ತುಂಬಿದ ಲಾರಿಗಳು‌ ಒಂದೇ ಸ್ಥಳದಲ್ಲಿ ನಿಲ್ಲುವುದರಿಂದ ವಾಹನಗಳಿಗೂ ಸಮಸ್ಯೆ ಉಂಟಾಗಲಿದ್ದು, ಹೆದ್ದಾರಿಯಲ್ಲಿ ಏಕಮುಖ ಸಂಚಾರಕ್ಕಾದರೂ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಲ್ಲಿ ಅನುಕೂಲವಾಗಲಿದೆ ಅನ್ನೋದು ಚಾಲಕರ ಅಭಿಪ್ರಾಯವಾಗಿದೆ.

    ಏಕಮುಖ ಸಂಚಾರಕ್ಕೆ ಅನುವು:

    ಇನ್ನು ಮುಖ್ಯಮಂತ್ರಿ ಸೇರಿದಂತೆ ಹಲವಾರು ರಾಜಕೀಯ ಮುಖಂಡರುಗಳು ಬಂದು ಹೋದರೂ, ಇದುವರೆಗೆ ಪರಿಸ್ಥಿತಿ ಸುಧಾರಣೆ ಆಗಿಲ್ಲ. ನಮಗೆ ನ್ಯಾಯ ಕೊಡಿಸಿ ಎಂದು ನೂರಾರು ಸಂಖ್ಯೆಯ ಲಾರಿ ಚಾಲಕರು ಹೆದ್ದಾರಿಯ ಮೇಲೆ ಕೂತು ಪ್ರತಿಭಟಿಸಿ, ತಮ್ಮ ಅಳಲನ್ನು ತೋಡಿಕೊಂಡರು.

    ಈಗಾಗಲೇ ಘಟ್ಟದಲ್ಲಿ ಮಣ್ಣು ಕುಸಿದ ಪ್ರದೇಶಗಳಲ್ಲಿ ತೆರವು ಕಾರ್ಯವನ್ನು ಮಾಡಲಾಗುತ್ತಿದ್ದು, ಸದ್ಯ ನಾಲ್ಕು ಚಕ್ರದ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಆದರೆ ಭಾರೀ ವಾಹನಗಳು ಓಡಾಟ ನಡೆಸಿದಲ್ಲಿ ಮತ್ತೆ ಹೆದ್ದಾರಿ‌ ಕುಸಿಯುವ ಆತಂಕ ಇದ್ದ ಹಿನ್ನಲೆ ಲಾರಿಗಳ ಸಂಚಾರವನ್ನು ತಡೆಹಿಡಿಯಲಾಗಿತ್ತು.

    ಪ್ರತಿಭಟನೆ ನಡೆಯುತ್ತಿರುವ ಸ್ಥಳಕ್ಕೆ ಕುಮಟಾ ಉಪವಿಭಾಗಾಧಿಕಾರಿ ರಾಹುಲ್ ರತ್ನಮ್ ಪಾಂಡೆ ಭೇಟಿ ನೀಡಿ, ಪ್ರತಿಭಟನಾನಿರತ ಲಾರಿ ಚಾಲಕರೊಂದಿಗೆ ಮಾತನಾಡಿದರು. ಕಾಮಗಾರಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಶೀಘ್ರವಾಗಿ ಕಾಮಗಾರಿ ಪೂರೈಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಅದೇ ರೀತಿ ಯಾವುದೇ ಲೋಡ್ ಇಲ್ಲದೇ ಖಾಲಿ ನಿಂತಿರುವ ಲಾರಿಗಳನ್ನು ಬಿಡಲು ಸೂಚನೆ ನೀಡುವುದಾಗಿ ಉಪವಿಭಾಗಾಧಿಕಾರಿ ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top