
ಭಟ್ಕಳ: ತಾಲೂಕಿನ ಪ್ರಸಿದ್ಧ ಮಾರಿಜಾತ್ರೆ ಬುಧವಾರದಿಂದ ಆರಂಭವಾಗಲಿದ್ದು ಮಾರಿಯಮ್ಮನ ಮೂರ್ತಿಯನ್ನು ಅದ್ಧೂರಿಯಾಗಿ ಗದ್ದುಗೆಯಲ್ಲಿ ಸ್ಥಾಪಿಸುವ ಮೂಲಕ ಜಾತ್ರೆ ವಿದ್ಯುಕ್ತವಾಗಿ ಚಾಲನೆಗೊಳ್ಳಲಿದೆ.
ಈ ಹಿನ್ನೆಲೆಯಲ್ಲಿ ದೇವಿಯ ಉತ್ಸವ ಮೂರ್ತಿಯ ನಿರ್ಮಾಣ ಕಾರ್ಯವು ಬಹುತೇಕವಾಗಿ ಪೂರ್ಣಗೊಂಡಿದ್ದು ಬುಧವಾರ ಅದ್ಧೂರಿಯಾಗಿ ಮೂರ್ತಿಯನ್ನು ಕರೆತರಲಾಗುತ್ತದೆ.
ಪಾರಂಪರಿಕವಾಗಿ ದೇವಿಯ ಮೂರ್ತಿಯನ್ನು ತಯಾರಿಸುವ ಮಣ್ಕುಳಿಯ ಮಾರುತಿ ಆಚಾರ್ಯರ ಕೈಗಳಲ್ಲಿ ದೇವಿಯ ಮೂರ್ತಿ ನಿರ್ಮಾಣವಾಗಿ ಬಣ್ಣ ಹಚ್ಚುವ ಕೆಲಸ ಪೂರ್ಣಗೊಂಡಿದೆ.
ಮಂಗಳವಾರ ಸಂಜೆ ತವರುಮನೆಪೂಜೆಯ ನಂತರ ಸುಹಾಸಿನಿಯರ ಪೂಜೆ ಹಾಗೂ ಷೋಡಶೋಪಚಾರ ಪೂಜೆಯನ್ನು ನೆರವೇರಿಸಿ ಬುಧವಾರ ಬೆಳಿಗ್ಗೆ 5.30ಕ್ಕೆ ವಿಶೇಷ ಚಂಡೆವಾದ್ಯ ಹಾಗೂ ನೃತ್ಯಗಳೊಂದಿಗೆ ಶ್ರೀದೇವಿಯ ಮೂರ್ತಿಯನ್ನು ಇಲ್ಲಿನ ಪೇಟೆ ರಸ್ತೆಯಲ್ಲಿರುವ ಮಾರಿಯಮ್ಮನ ಗುಡಿಗೆ ಕರೆತಂದು ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ ಆ ಮೂಲಕ ಎರಡು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುವ ಮಾರಿಜಾತ್ರೆ ಚಾಲನೆಯಾಗಲಿದೆ.
ಆಗಸ್ಟ್ 4 ಮತ್ತು 5 ರಂದು ಮಾರಿಜಾತ್ರೆ ನಡೆಯಲಿದ್ದು ಕೋವಿಡ್ ಭೀತಿಯಿರುವುದರಿಂದ ಸರಳವಾಗಿ ಜಾತ್ರೆ ಆಚರಿಸಲಾಗುತ್ತಿದ್ದು ಭಕ್ತಾದಿಗಳು ಸಹಕರಿಸಬೇಕು ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.