
ಶಿರಸಿ: ತಾಲೂಕಿನ ಬೆಟ್ಟಕೊಪ್ಪದಲ್ಲಿ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿದ್ದು ಜಾನವಾರಿಗೆ ಬಳಸಲೆಂದು ಸಂಗ್ರಹಿಸಿಟ್ಟಿದ್ದ ಹುಲ್ಲು ಬೆಂಕಿಗೆ ಆಹುತಿಯಾಗಿದೆ. ಗ್ರಾಮಸ್ಥರು ಹಾಗೂ ಅಗ್ನಿಶಾಮಕ ದಳದವರು ಸಕಾಲಕ್ಕೆ ನೆರವಾಗಿ ಸಂಭವನೀಯ ದುರಂತ ತಪ್ಪಿಸಿದರು.
ಊರಿನ ರಾಘವೇಂದ್ರ ಎಸ್. ಹೆಗಡೆ ಅವರಿಗೆ ಸಂಬಂಧಿಸಿದ ಕೊಟ್ಟಿಗೆ ಇದಾಗಿದ್ದು, ವಿದ್ಯುತ್ ಶಾರ್ಟ ಸಕ್ರ್ಯೂಟನಿಂದ ಈ ಅವಘಡ ಸಂಭವಿಸಿದೆ. 10 ಸಾವಿರ ರೂಪಾಯಿಗೂ ಅಧಿಕ ಹುಲ್ಲು ಬೆಂಕಿಗೆ ಆಹುತಿಯಾಗಿದೆ.
ಈ ಮಧ್ಯೆ ಅಗ್ನಿಶಾಮಕ ದಳದ ಪ್ರಭಾರಿ ಠಾಣಾ ಅಧಿಕಾರಿ ಸದಾನಂದ ನಾಯ್ಕ, ಪ್ರಮುಖ ಅಗ್ನಿಶಾಮಕ ಲಕ್ಷ್ಮಣ ಪಟಗಾರ ಹಾಗೂ ಅವರ ಬಳಗ ದೂರವಾಣಿ ಕರೆ ಮಾಡಿದ ಕೇವಲ 10 ನಿಮಿಷದಲ್ಲಿ ಸ್ಥಳಕ್ಕೆ ಬಂದು ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ಆದರೆ, ಕೊನೇ ಕ್ಷಣದಲ್ಲಿ ಬೆಂಕಿ ನಂದಿಸುತ್ತಿರುವಾಗಲೇ ಅಗ್ನಿಶಾಮಕ ದಳದ ವಾಹನದ ಪಂಪ್‍ನ ಪ್ರಮುಖ ಭಾಗವೊಂದು ಆಕಸ್ಮಿಕವಾಗಿ ಸಾರ್ವಜನಿಕರ ಎದುರೇ ಒಡೆದು ಹೋದ ಘಟನೆಯೂ ನಡೆದಿದೆ. ಆ ವೇಳೆಗೆ ಬಹುತೇಕ ಬೆಂಕಿ ನಂದಿತ್ತು.