
ಸಿದ್ದಾಪುರ: ಪ್ರವಾಹ ಪರಿಸ್ಥಿತಿ ಸಂದರ್ಭದಲ್ಲಿ ಸರಿಯಾದ ನಿರ್ವಹಣೆ ತೋರುವಲ್ಲಿ ವಿಫಲರಾದ ಅಧಿಕಾರಿಗಳನ್ನು ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ತರಾಟೆಗೆ ತೆಗೆದುಕೊಂಡರು.
ಸಿದ್ದಾಪುರ ತಾಲೂಕಿನ ಕಾನಸೂರು, ಬಾಳೂರು ಮುಂತಾದ ಕಡೆಗಳಲ್ಲಿ ಪ್ರವಾಹೋತ್ತರ ಪರಿಸ್ಥಿತಿ ವೀಕ್ಷಣೆಗೆ ಆಗಮಿಸಿದ್ದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಧಿಕಾರಿಗಳ ಬೇಜವಾಬ್ದಾರಿ ಹೇಳಿಕೆಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದರು.
ಜುಲೈ 23 ರ ಮಹಾ ಪ್ರವಾಹಕ್ಕೆ ತಾಲೂಕಿನ ದಂಟಕಲ್ ಗ್ರಾಮದ ರಸ್ತೆ ಕುಸಿದು ಹೋಗಿದೆ. ಕಳೆದ 10 ದಿನಗಳಿಂದ ಈ ಗ್ರಾಮಕ್ಕೆ ಸಂಚಾರವೇ ನಿಲುಗಡೆಯಾಗಿದೆ. ರಸ್ತೆ ಸರಿಪಡಿಸುವಂತೆ ಅಧಿಕಾರಿಗಳ ಬಳಿ ಗ್ರಾಮಸ್ಥರು ಮನವಿ ಮಾಡಿಕೊಂಡರೂ ಇದುವರೆಗೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದರಿಂದ ಬೇಸತ್ತ ಸ್ಥಳೀಯರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ರಸ್ತೆ ಸಂಪರ್ಕ ಕಲ್ಪಿಸುವಂತೆ ಮನವಿ ಮಾಡಿ, ಅರ್ಜಿ ಸಲ್ಲಿಸಿದರು.
ಈ ಅರ್ಜಿಗೆ ಸಂಬಂಧಿಸಿದಂತೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮುಲ್ಲೈ ಮುಗಿಲನ್ ತ್ವರಿತವಾಗಿ ಸ್ಥಳ ವೀಕ್ಷಣೆ ಮಾಡಿ, ರಸ್ತೆ ಸಂಪರ್ಕ ಕಲ್ಪಿಸುವಂತೆ ತಾಕೀತು ಮಾಡಿದರು.
ಕಾನಸೂರಿನಲ್ಲಿ ಶಿರಸಿ-ಸಿದ್ದಾಪುರ ರಸ್ತೆ ಬದಿ ಕುಸಿದಿದ್ದು, ಇದನ್ನು ಕೂಡಲೇ ಸರಿಪಡಿಸಲು ಯೋಜನೆ ರೂಪಿಸುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದರು.