
ಕುಮಟಾ: ತಾಲೂಕಿನಾದ್ಯಂತ ಕೋವಿಡ್ ವ್ಯಾಕ್ಸಿನ್ ಪಡೆಯಲು ಸಾರ್ವಜನಿಕರು ಪರದಾಡುತ್ತಿದ್ದು, ಶೀಘ್ರದಲ್ಲೇ ಸೂಕ್ತ ವ್ಯವಸ್ಥೆ ಕಲ್ಪಿಸಿ, ಜನತೆ ಅಲೆದಾಡುವುದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ನೇತೃತ್ವದಲ್ಲಿ ಸೋಮವಾರ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ತಾಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ಕೋವಿಡ್ ವ್ಯಾಕ್ಸಿನ್ ಪಡೆಯಲು ಜನತೆ ಹರಸಾಹಸಪಡುತ್ತಿದ್ದು, ತಾಲೂಕಾಡಳಿತದಿಂದ ಸರಿಯಾದ ಮಾಹಿತಿಯಿಲ್ಲದೇ ತಾಲೂಕಾಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಲಭ್ಯವಿರುವ ವ್ಯಾಕ್ಸಿನ್ ಬಗ್ಗೆ ಮೊದಲೇ ಮಾಹಿತಿ ನೀಡಿ, ವ್ಯಾಕ್ಸಿನ್ ಪಡೆಯುವವರಿಗೆ ದಿನಾಂಕವನ್ನು ನಿಗದಿಪಡಿಸಬೇಕು. ನಿಗದಿಪಡಿಸಿದ ದಿನಾಂಕಕ್ಕೆ ವ್ಯಾಕ್ಸಿನ್ ಪಡೆಯಲು ಆಗಮಿಸಲು ಸೂಚಿಸಿದರೆ, ಪ್ರತಿನಿತ್ಯ ಹಳ್ಳಿಯಿಂದ ಬರುವವರಿಗೆ ಅನುಕೂಲವಾಗುತ್ತದೆ. ಅಲ್ಲದೇ, ಪ್ರತಿದಿನ ಅಲೆದಾಡುವುದನ್ನು ತಪ್ಪಿಸಬಹುದಾಗಿದೆ. ಆದ್ದರಿಂದ ತಾಲೂಕಿನಲ್ಲಿ ದಿನದ ವ್ಯಾಕ್ಸಿನ್ ಲಭ್ಯತೆಯನ್ನು ವಾರದ ಮುಂಚಿತವಾಗಿ ತಿಳಿಸಿ, ಈ ರೀತಿಯ ಗೊಂದಲಗಳು ಮುಂದಾಗದಂತೆ ಸರಿಪಡಿಸುವಂತೆ ಮನವಿಯಲ್ಲಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಿಮ್ಮಪ್ಪ ನಾಯಕ, ಮಂಜುನಾಥ ಗೌಡ, ನಾರಾಯಣ ಗೌಡ, ಸಿ.ಡಿ.ನಾಯ್ಕ ಸೇರಿದಂತೆ ಇನ್ನಿತರರು ಇದ್ದರು.