
ಹೊನ್ನಾವರ: ತಾಲೂಕಿನ ಹಾಡಗೇರಿಯ ಗುಂಡಬಾಳ ನದಿಯಲ್ಲಿ ನಿನ್ನೆ ಮಧ್ಯಾಹ್ನ ತಾಯಿಯೊಂದಿಗೆ ಬಟ್ಟೆ ತೊಳೆಯಲು ಬಂದ ಬಾಲಕ ನೀರುಪಾಲಾಗಿದ್ದ. ಶೋಧಕಾರ್ಯ ನಡೆದಿದ್ದು ಸೋಮವಾರ ಮಧ್ಯಾಹ್ನ 1 ಘಂಟೆಯ ಸುಮಾರಿಗೆ ಬಾಲಕನ ಶವ ಪತ್ತೆಯಾಗಿದೆ.
ತಾಲೂಕಿನ ಹಡಿನಬಾಳ ಗ್ರಾಮದ ಹಾಡಗೇರಿಯ ಶೃತಿ ರಮೇಶ ನಾಯ್ಕ ಇವರು ಮನೆ ಸಮೀಪದ ಗುಂಡಬಾಳ ನದಿ ತೀರದಲ್ಲಿ ಬಟ್ಟೆ ತೊಳೆಯಲು ಆಗಮಿಸಿದ್ದರು. ತಾಯಿಯೊಂದಿಗೆ ಆಗಮಿಸಿದ ಒಂದುವರೆ ವರ್ಷದ ಮಗ ಕಾರ್ತಿಕ ನಾಯ್ಕ ಆಕಸ್ಮಿಕವಾಗಿ ನದಿಯಲ್ಲಿ ಮುಳುಗಿದ್ದ. ವಿಷಯ ತಿಳಿದ ಹೊನ್ನಾವರ ಪೆÇೀಲಿಸ್ ಠಾಣ ಯ ಸಿಪಿಐ ಶ್ರೀಧರ ಎಸ್.ಆರ್ ಹಾಗೂ ಪಿಎಸೈ ಶಶಿಕುಮಾರ ನೇತ್ರತ್ವದಲ್ಲಿ ಸಿಬ್ಬಂದಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಶೋಧ ಕಾರ್ಯ ನಡೆಸಿದ್ದು, ಇಂದು ಬಾಲಕನ ಶವ ಪತ್ತೆಯಾಗಿದೆ.
ಹಾಡಗೇರಿಯಲ್ಲಿ ನೀರಿನಲ್ಲಿ ಬಿದ್ದು ನಾಪತ್ತೆಯಾಗಿದ್ದ ಕಾರ್ತಿಕ ರಮೇಶ ನಾಯ್ಕ ಮೃತ ದೇಹ ಬಿದ್ದ ಜಾಗದಿಂದ ಸುಮಾರು ಅರ್ಧ ಕಿ. ಮೀ. ದೂರದಲ್ಲಿ ಸಿಕ್ಕಿದೆ. ಹಿಂಡಿಗೆ ಸಿಕ್ಕಿ ಹಾಕಿಕೊಂಡು ತೇಲುತ್ತಿದ್ದು ಎನ್ನಲಾಗಿದೆ. ಪುಟ್ಟ ಬಾಲಕನ ಆಕಸ್ಮಿಕ ಅವಗಡಕ್ಕೆ ಕುಟುಂಬದವರ ರೋಧನ ಮುಗಿಲು ಮುಟ್ಟಿದೆ.