
ಕಾರವಾರ: ಮಾಜಿ ಸಿಎಂ ಹಾಗು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಜಿಲ್ಲೆಗೆ ಪ್ರವಾಸ ಕೈಗೊಂಡಿದ್ದು ಸೋಮವಾರ ಕದ್ರಾ ಪ್ರದೇಶಕ್ಕೆ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆ ಆಲಿಸಿದರು.
ತಮ್ಮ ಅಳಲು ತೋಡಿಕೊಂಡ ಸಂತ್ರಸ್ತರು ತಮಗೆ ಶಾಶ್ವತ ಪರಿಹಾರ ಒದಗಿಸಿಕೊಡಬೇಂಕೆಂದು ಮನವಿ ಮಾಡಿದರು. ಕಳೆದ ಬಾರಿ ಪರಿಹಾರ ಹಣ ಇನ್ನೂ ಕೊಟ್ಟಿಲ್ಲ. ಅಲ್ಲದೇ ಪ್ರವಾಹದಿಂದ ಎಲ್ಲಾ ಕೊಚ್ಚಿಹೋಗಿದ್ದು ಅತಿಕ್ರಮಣ ಜಾಗದಲ್ಲಿ ವಾಸ ಮಾಡುತ್ತಿರುವುದಕ್ಕೆ ಅರಣ್ಯ ಇಲಾಖೆಯವರು ತೊಂದರೆ ಮಾಡುತ್ತಿದ್ದು ಶಾಶ್ವತ ಪರಿಹಾರ ಒದಗಿಸಿಕೊಡುವಂತೆ ಮನವಿ ಮಾಡಿದರು.
ಸಂತ್ರಸ್ಥರ ಸಮಸ್ಯೆ ಆಲಿಸಿದ ಸಿದ್ಧರಾಮಯ್ಯ, ಕೆಪಿಸಿಎಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಡ್ಯಾಮ್ ನಿಂದ ನೀರು ಬಿಡುವ ಮುನ್ನ ಜನರು ಸುರಕ್ಷಿತ ಸ್ಥಳಕ್ಕೆ ತಲುಪಿರುವುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕು ಹಾಗು ಸರಿಯಾದ ಮಾಹಿತಿ ಜನರಿಗೆ ತಿಳಿಸಬೇಕು. ಕೆಪಿಸಿಎಲ್ ಖಾಲಿ ಕ್ವಾಟರ್ಸ್ ಗಳಲ್ಲಿ ಸಂತ್ರಸ್ಥರಿಗೆ ಅವಕಾಶ ಕೊಡಬೇಕು. ಅರಣ್ಯ ಇಲಾಖೆಯವರು ಜನರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಬಾರದು. ಈ ಕುರಿತಾಗಿ ಮುಖ್ಯಮಂತ್ರಿಗಳ ಬಳಿ ಮಾತನಾಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಆರ್.ವಿ.ದೇಶಪಾಂಡೆ, ಮಾಜಿ ಶಾಸಕ ಸತೀಶ್ ಸೈಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.