
ಕಾರವಾರ: ಜಿಲ್ಲಾ ಪತ್ರಿಕಾ ಭವನ ನಿರ್ವಹಣಾ ಸಮಿತಿಯಿಂದ ಪತ್ರಿಕಾ ದಿನಾಚರಣೆಯ ಅಂಗವಾಗಿ ಸಿದ್ದರದಲ್ಲಿ ವಿಭಿನ್ನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬಿಳಿ ಲುಂಗಿ, ಕೇಸರಿ ಅಂಗಿ, ಶಲ್ಯ ಧರಿಸಿ ಪಕ್ಕಾ ಗ್ರಾಮೀಣ ಗೆಟಪ್ನಲ್ಲಿ ಕೆಸರು ಗದ್ದೆಗಿಳಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹಾಗೂ ಇತರ ಅಧಿಕಾರಿಗಳು ಭಾನುವಾರ ಭತ್ತದ ಸಸಿಗಳನ್ನು ನಾಟಿ ಮಾಡಿದರು. ಕೆ.ಡಿ.ಪೆಡ್ನೇಕರ್ ಅವರ ಜಮೀನಿನಲ್ಲಿ ಸುಮಾರು ಒಂದು ಗಂಟೆಗಳ ಕಾಲ ಡಿಸಿ ಮುಲ್ಲೈ ಮುಗಿಲನ್, ಎಡಿಸಿ ಕೃಷ್ಣಮೂರ್ತಿ ಎಚ್.ಕೆ., ಎಸಿ ವಿದ್ಯಾಶ್ರೀ ಚಂದರಗಿ, ತಹಸೀಲ್ದಾರ್ ನಿಶ್ಚಲ ನರೋನಾ ಭಾಗವಹಿಸಿ, ಕೃಷಿ ಕಾರ್ಯದ ಅನುಭವ ಪಡೆದರು. ಸಸಿಮಡಿಗೆ ಪೂಜೆ ಮಾಡಿ ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಸಸಿ ನಾಟಿ ಮಾಡಿದರು.
ಈ ಸಂದರ್ಭದಲ್ಲಿ ಜಮೀನಿನ ಮಾಲೀಕ ಕೆ.ಡಿ.ಪೆಡ್ನೇಕರ್ ಅವರು ನಾಟಿ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲ ಅಧಿಕಾರಿಗಳನ್ನು,ರೋಟರಿ ಅಧ್ಯಕ್ಷ, ನರೇಂದ್ರ ದೇಸಾಯಿ, ಮೀನುಗಾರರ ಮುಖಂಡ ಗಣಪತಿ ಉಳ್ವೇಕರ್, ಸೇಂಟ್ ಮಿಲಾಗ್ರಿಸ್ ಕೋ-ಆಪ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಜಾರ್ಜ್ ಫರ್ನಾಂಡೀಸ್ ಅವರನ್ನು ಸನ್ಮಾನಿಸಿದರು.
ಪತ್ರಿಕಾ ಭವನ ನಿರ್ವಹಣಾ ಸಮಿತಿ ಅಧ್ಯಕ್ಷ ಟಿ.ಬಿ.ಹರಿಕಾಂತ, ಉಪಾಧ್ಯಕ್ಷ ಗಿರೀಶ ನಾಯ್ಕ, ಕಾರ್ಯದರ್ಶಿ ದೀಪಕ್ ಗೋಕರ್ಣ ಇದ್ದರು. ನಂತರ ರೋಟರಿ ಕ್ಲಬ್ನಿಂದ ನೆರೆ ಸಂತ್ರಸ್ತ 5 ಕುಟುಂಬಗಳಿಗೆ ದಿನಸಿ ಕಿಟ್ಗಳನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹಸ್ತಾಂತರಿಸಿದರು.