
ಕಾರವಾರ: ಪತ್ರಕರ್ತರು ಸಮಾಜಕ್ಕೆ ಅಂಟಿದ ರೋಗಗಳಿಗೆ ಚಿಕಿತ್ಸೆ ಕೊಡುವ ವೈದ್ಯರಿದ್ದಂತೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ವಿಶ್ಲೇಷಿಸಿದರು.
ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸಿದ್ದರ ಶ್ರೀ ನರಸಿಂಹ ದೇವಸ್ಥಾನದಲ್ಲಿ ಭಾನುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದ ಕೆಲ ಕೆಡುಕುಗಳ ಮೂಲ ಅರಿತು ಜನರಿಗೆ ನೋವೂ ಆಗದಂತೆ, ಕಾಯಿಲೆಯೂ ಗುಣವಾಗುವಂತೆ ಚುಚ್ಚುಮದ್ದು ನೀಡುವ ಸವಾಲಿನ ಜವಾಬ್ದಾರಿ ಮಾಧ್ಯಮಗಳ ಮೇಲಿದೆ. ಉತ್ತರ ಕನ್ನಡ ಜಿಲ್ಲೆಯ ಮಾಧ್ಯಮಗಳು ಅದನ್ನು ಯಶಸ್ವಿಯಾಗಿ ನಿಭಾಯಿಸುತ್ತಿವೆ ಎಂದರು.
ಅತಿಥಿಯಾಗಿದ್ದ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ., ಕೃಷಿ ವಲಯ ತುಂಬಾ ಶ್ರಮ ಬೇಡುವಂಥದ್ದು, ಅವರ ಬದುಕನ್ನು ಮೇಲೆತ್ತುವ, ಪ್ರೇರಣೆ ನೀಡುವ ನಿಟ್ಟಿನಲ್ಲಿ ಕಾರವಾರದ ಪತ್ರಕರ್ತರು ಹಮ್ಮಿಕೊಳ್ಳುತ್ತಿರುವ ಕಾರ್ಯ ಶ್ಲಾಘನೀಯ ಎಂದರು. ಉಪವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ ಮಾತನಾಡಿ, ಸತ್ಯಮೇವ ಜಯತೇ ಎಂಬ ಘೋಷ ವಾಕ್ಯವನ್ನು ಪತ್ರಕರ್ತರು ಜಾರಿಗೆ ತರುತ್ತಿದ್ದಾರೆ ಎಂದರು.
ಟ್ಯಾಗೋರ್ ಪ್ರಶಸ್ತಿ ಪ್ರದಾನ:
ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡುವ ಟ್ಯಾಗೋರ್ ಪ್ರಶಸ್ತಿಯನ್ನು ವಿಜಯ ಕರ್ನಾಟಕದ ಶಿವಮೊಗ್ಗ ಆವೃತ್ತಿಯ ಮುಖ್ಯಸ್ಥ ವಿವೇಕ ಮಹಾಲೆ, ದಿಗ್ವಿಜಯ ನ್ಯೂಸ್ ಜಿಲ್ಲಾ ವರದಿಗಾರ ಶೇಷಗಿರಿ ಮುಂಡಳ್ಳಿ, ಪ್ರಜಾವಾಣಿ ಜಿಲ್ಲಾ ವರದಿಗಾರ ಸದಾಶಿವ ಎಂ.ಎಸ್.ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿವೇಕ ಮಹಾಲೆ, ಪ್ರಾಮಾಣಿಕತೆ, ಪ್ರಯತ್ನಶೀಲತೆ ಇದ್ದಲ್ಲಿ ಉನ್ನತ ಸ್ಥಾನಕ್ಕೇರಬಹುದು. ಸ್ಥಾನ ಸಿಕ್ಕಾಗ ಬೀಗಬಾರದು. ಇಂದು ಪತ್ರಕರ್ತರಲ್ಲೂ ವರ್ಕ್ ಪ್ರಾಮ್ ಹೋಂ ಸಂಸ್ಕೃತಿ ಹೆಚ್ಚುತ್ತಿದೆ. ಇದು ವಿಷಯದ ಗಂಭೀರತೆ ಹಾಗೂ ಅದರ ಆಳ-ಅಗಲವನ್ನು ಜನರಿಗೆ ಅರ್ಥ ಮಾಡಿಸುವಲ್ಲಿ ವಿಫಲವಾಗುತ್ತಿದೆ ಎಂದರು.
ಸಮ್ಮಾನ:
ಹಲವು ಸವಾಲುಗಳ ನಡುವೆ 50 ಎಕರೆ ಭತ್ತದ ಕೃಷಿ ಮಾಡಿ ಸಾಧನೆ ಮಾಡಿದ ಹಳಗಾದ ಧೋಲ ಗ್ರಾಮದ ಪ್ರಗತಿಪರ ರೈತ ಯಶವಂತ ಉಂಡೇಕರ್ ಹಾಗೂ ಸಿದ್ದರ ಗ್ರಾಮದ ಹಿರಿಯ ಕೃಷಿಕ, ನಿವೃತ್ತ ಶಿಕ್ಷಕ ಅನಂತ ಶಾಬು ನಾಯ್ಕ ದಂಪತಿಯನ್ನು ಸಂಘದಿಂದ ಸನ್ಮಾನಿಸಲಾಯಿತು. ತಹಸೀಲ್ದಾರ್ ನಿಶ್ಚಲ ನರೋನಾ, ವೈಲವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ ನಾಯ್ಕ, ಉಪಾಧ್ಯಕ್ಷೆ ಮೇಘಾ ಗಾಂವಕರ್, ದೇವಸ್ಥಾನ ಸಮಿತಿ ಮುಕ್ತೇಸರ ದತ್ತಾತ್ರೆಯ ಗಾಂವಕರ್,ಅರ್ಚಕ ವಿಠ್ಠಲ ಜೋಷಿ, ದಿಲೀಪ ದತ್ತಾ ರಾಣೆ, ಸಾಯಿನಾಥ ನಾಯ್ಕ, ಸುರೇಶ ಗುರವ್, ದೇವಿದಾಸ ನಾಯ್ಕ, ಗೋಪಾಳಿ ಕೊಳಂಬಕರ್, ಬಾಬು ನಾಯ್ಕ, ಸುಭಾಷ ರಾಣೆ, ಮಹಾಬಲೇಶ್ವರ ನಾಯ್ಕ, ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ದರ್ಶನ ನಾಯ್ಕ, ಅರವಿಂದ ಗುನಗಿ ವೇದಿಕೆಯಲ್ಲಿದ್ದರು.
ಸಂಘದ ಅಧ್ಯಕ್ಷ ಟಿ.ಬಿ.ಹರಿಕಾಂತ ಸ್ವಾಗತಿಸಿದರು. ದೇವರಾಜ ನಾಯ್ಕ ಅತಿಥಿ ಪರಿಚಯ ಮಾಡಿದರು. ಸಂದೀಪ ಸಾಗರ ಕಾರ್ಯಕ್ರಮ ನಿರೂಪಿಸಿದರು. ಸುಭಾಶ್ಚಂದ್ರ ಎನ್.ಎಸ್.ವಂದಿಸಿದರು.ದೇವಸ್ಥಾನ ಸಮಿತಿ ಮುಕ್ತೇಸರ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ರಾಜೇಂದ್ರ ರಾಣೆ ಸಂಪೂರ್ಣ ಕಾರ್ಯಕ್ರಮ ಸಂಘಟಿಸಿದ್ದರು.