
ಶಿರಸಿ: ತಾಲೂಕಿನ ಯಡಳ್ಳಿ ಕೃಷಿ ವೇದಿಕೆ ಮತ್ತು ಸ್ಥಳೀಯ ಕಾನಗೋಡಗ್ರೂಪ್ ವಿವಿದ್ದೋದ್ದೇಶ ಸಹಕಾರಿ ಸಂಘದ ವತಿಯಿಂದ ಕಾಳುಮೆಣಸಿನ ನೂತನ ತಳಿ ಸಿಗಂಧಿ ಬೆಳೆಯ ಕುರಿತಾಗಿ ರೈತರಿಗೆ ವಿಶೇಷ ಕಾರ್ಯಗಾರವನ್ನು ಪ್ರಾತ್ಯಕ್ಷಿಕೆಯೊಂದಿಗೆ ಕಬ್ನಳ್ಳಿಯ ಮಂಜುನಾಥ ಹೆಗಡೆಯವರ ತೋಟದಲ್ಲಿ ನೀಡಲಾಯಿತು.ಸಿಗಂಧಿ ತಳಿಯ ಕುರಿತಾಗಿ ಇತ್ತೀಚೆಗಷ್ಟೆ ಡೆಲ್ಲಿಯ ಪಿ.ವಿ.ಎಫ್.ಆರ್ ದಿಂದ ಕರ್ನಾಟಕ ರಾಜ್ಯಕ್ಕೆ ಪ್ರಥಮವಾಗಿ ಪೇಟೆಂಟ್ ಪಡೆದ ಕೀರ್ತಿಗೆ ಪಾತ್ರರಾದ ರಮಾಕಾಂತ ಹೆಗಡೆ ಹುಣಸೆಕೊಪ್ಪರವರು ಅದನ್ನು ಬೆಳೆಯುವ ಹಾಗೂ ಅದರ ಸಂಪೂರ್ಣ ಮಾಹಿತಿ ನೀಡುತ್ತ ಇದೊಂದು ರೈತರಿಗೆ ಬಹಳ ಅನುಕೂಲಕರ ಬೆಳೆಯಾಗಿದೆ ಎಂದರು. ಕಬ್ನಳ್ಳಿಯ ಕಾಳುಮೆಣಸು ತೋಟದಲ್ಲಿ ಪ್ರಾತ್ಯಕ್ಷಿಕೆಯೊಂದಿಗೆ ಸವಿವರ ನೀಡಿದರು. ಸುತ್ತಮುತ್ತಲಿನ 100ಕ್ಕೂ ಮೇಲ್ಪಟ್ಟುರೈತರು ಪಾಲ್ಗೊಂಡು ಮಾಹಿತಿ ಪಡೆದಿದ್ದು ವಿಶೇಷ.ಇದೇ ಸಂದರ್ಭದಲ್ಲಿ ಯಡಳ್ಳಿ ಕೃಷಿ ವೇದಿಕೆಯಿಂದ ರಮಾಕಾಂತ ಹೆಗಡೆಯವರನ್ನು ಶಾಲು ಹೊದೆಸಿ ಸ್ಮರಣಿಕೆಯೊಂದಿಗೆ ಸನ್ಮಾನಿಸಲಾಯಿತು.ಅತಿಥಿಯಾಗಿ ಪಾಲ್ಗೊಂಡಿದ್ದ ಕೃಷಿ ತಜ್ಞ ಕಿಶೋರ ಹೆಗಡೆ ಬೆಳ್ಳೆಕೇರಿ ಮಾತನಾಡಿ ಇಲ್ಲಿಯ ಹವಾಮಾನಕ್ಕೆ ಹೊಸತಳಿ ಹೊಂದಿಕೊಳ್ಳುವ ಬಗ್ಗೆ ವಿವರಿಸಿದರು. ಕಾನಗೋಡ ಗ್ರೂಪ್ ಸೇವಾ ಸಹಕಾರಿ ಸಂಘದ ಅಧ್ಯಕ್ಷಜಿ.ಆರ್ ಹೆಗಡೆ ಬೆಳ್ಳೆಕೇರಿ ಮಾತನಾಡಿ ಕೃಷಿ ವೇದಿಕೆಯಿಂದ ಮುಂದಿನ ದಿನಗಳಲ್ಲಿ ರೈತರಿಗಾಗಿ ಹೊಮ್ಮಿಕೊಳ್ಳುತ್ತಿರುವ ವಿವಿಧಕಾರ್ಯ ಹಾಗೂ ನಡೆ ಬಗ್ಗೆ ವಿವರಿಸಿದರು. ಅಧ್ಯಕ್ಷತೆಯನ್ನು ಯಡಳ್ಳಿ ಸೇವಾ ಸಹಕಾರಿ ಸಂಘದ ನಿರ್ದೇಶಕ ಶ್ರೀಪತಿ ಹೆಗಡೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ರಾಜ್ಯಅಡಿಕೆ ಬೆಳೆಗಾರರ ಸಮಿತಿಗೆ ಸದಸ್ಯರಾಗಿ ಆಯ್ಕೆಗೊಂಡ ಜಿ.ಆರ್.ಹೆಗಡೆ ಬೆಳ್ಳೆಕೇರಿ ಯವರನ್ನು ಶಾಲು ಹೊದೆಸಿ ಸನ್ಮಾನಿಸಲಾಯಿತು.ಯಡಳ್ಳಿ ಸೇವಾಸಹಕಾರಿ ಸಂಘದ ನಿರ್ದೇಶಕ ಮಂಜುನಾಥ ಹೆಗಡೆ ಕಬ್ನಳ್ಳಿ ಸ್ವಾಗತಿಸಿದರೆ ಕೃಷಿ ವೇದಿಕೆಯಗಣೇಶ ಸಣ್ಣಕೇರಿ ವಂದಿಸಿದರು.