
ಶಿರಸಿ: ಕೊರೊನಾದಿಂದಾಗಿ ಛಾಯಾಗ್ರಾಹಕರು ಸಂಕಷ್ಟದಲ್ಲಿದ್ದು, ಅಸಂಘಟಿತ ವಲಯದಲ್ಲಿ ಗುರುತಿಸಿಕೊಂಡ ಪೋಟೊ ಹಾಗೂ ವಿಡಿಯೋ ಗ್ರಾಪರ್ ಗಳನ್ನು ಕಾರ್ಮಿಕ ಇಲಾಖೆ ವ್ಯಾಪ್ತಿಗೆ ಸೇರಿಸುವಂತೆ ಶಿರಸಿ ತಾಲೂಕಾ ಪೋಟೋಗ್ರಾಪರ್ಸ್ ಮತ್ತು ವಿಡಿಯೋಗ್ರಾಪರ್ಸ್ ಅಸೋಸಿಯೇಶನ್ ಆಗ್ರಹಿಸಿದೆ.
ಈ ಕುರಿತು ನಗರದ ರಾಘವೇಂದ್ರ ಕಲ್ಯಾಣಮಂಟಪದಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ರಾಜು ಕಾನಸೂರು ಶಿರಸಿ ಸಂಘದ ವ್ಯಾಪ್ತಿಯಲ್ಲಿ 118 ಸದಸ್ಯರಿದ್ದು ಕಳೆದ ಎರಡು ವರ್ಷಗಳಿಂದ ಕೋವಿಡ್ ನಿಂದಾಗಿ ತುಂಬಾ ನಷ್ಟ ಅನುಭವಿಸಿದ್ದಾರೆ. ಅಲ್ಲದೇ ಲಾಕೌಡೌನ್ ಇತ್ಯಾದಿಗಳಿಂದಾಗಿ ಕೆಲಸಗಳೇ ಇಲ್ಲದಂತಾಗಿದೆ. ಬಹುತೇಕರು ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗದೇ ಸಂಕಷ್ಟದಲ್ಲಿದ್ದಾರೆ.ಈ ಹಿನ್ನೆಲೆಯಲ್ಲಿ ಅಸಂಘಟಿತ ವಲಯದಲ್ಲಿ ಬರುವ ಪೋಟೋಗ್ರಾಪರ್ ಮತ್ತು ವಿಡಿಯೋಗ್ರಾಪರ್ ಗಳನ್ನು ಸಹ ಕಾರ್ಮಿಕ ಇಲಾಖೆ ವ್ಯಾಪ್ತಿಗೆ ತರಬೇಕು ಎಂದು ಒತ್ತಾಯಿಸಿದರು.
ಸಾಮಾಜಿಕ ಜಾಲತಾಣದಲ್ಲಿ ನಮ್ಮವರ ಪೋಟೊವನ್ನು ಇತರರು ದುರುಪಯೋಗ ಪಡಿಸಿಕೊಳ್ಳುತ್ತಿದ್ದು, ಪೋಟೊ ಮತ್ತು ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಗೆ ಹಾಕದಂತೆ ಅಸೋಸಿಯೇಷನ್ ಸದಸ್ಯರಿಗೆ ಸೂಚಿಸಲಾಗಿದೆ.ಅಸೋಸಿಯೇಷನ್ ಸದಸ್ಯರಿಗೆ ಗುರುತಿನಚೀಟಿ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ನಿಗದಿತ ದರ ನಿಗದಿಪಡಿಸಲು ತೀರ್ಮಾನಿಸಿ ಏಕರೂಪದ ದರಪಟ್ಟಿ ಪ್ರಕಟಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಸಂತೋಷ ಶಿರ್ಸಿಕರ್, ಪ್ರಮುಖರಾದ ಲಕ್ಷ್ಮೀನಾರಾಯಣ ಭಟ್ಟ, ಜಗದೀಶ ಜೈವಂತ, ನವೀನ್ ಗಾಂವ್ಕರ್, ರವಿ ಹಿರೇಮಠ ಉಪಸ್ಥಿತರಿದ್ದರು.