
ಮುಂಡಗೋಡ: ಲಾರಿ ಚಾಲಕನನ್ನು ಅಪಹರಿಸಿ, ಆತನ ಬಳಿಯಿದ್ದ 22 ಸಾವಿರ ರೂಪಾಯಿ ದೋಚಿಕೊಂಡು ಹೋದ ಘಟನೆ ತಾಲೂಕಿನ ಕಾತೂರ ಸಮೀಪ ಸಂಭವಿಸಿದೆ. ಯಲ್ಲಾಪುರ ತಾಲೂಕಿನ ಮಂಚಿಕೇರಿ ಗ್ರಾಮದ ಲಾರಿ ಚಾಲಕ ಅಬ್ದುಲ್ ಪೀರಸಾಬ ಶೇಖ ಹಣ ಕಳೆದುಕೊಂಡವರಾಗಿದ್ದಾರೆ.
ಅಬ್ದುಲ್ ತನ್ನ ಲಾರಿಯಲ್ಲಿ ಹುಬ್ಬಳ್ಳಿಯಿಂದ ಶಿರಸಿ ಕಡೆ ಹೊರಟಿದ್ದು, ಮೂತ್ರವಿಸರ್ಜನೆಗೆಂದು ಕಾತೂರ ಸಮೀಪದ ರಸ್ತೆ ಪಕ್ಕ ನಿಲ್ಲಿಸಿದ್ದಾನೆ. ಈ ವೇಳೆ ಹಿಂದಿನಿಂದ ಬಂದ ಬೊಲೆರೋ ವಾಹನದಲ್ಲಿದ್ದ ನಾಲ್ಕು ಜನ ದುಷ್ಕರ್ಮಿಗಳು, ಚಾಲಕನ ಕಣ್ಣಿಗೆ ಹಾಗೂ ಕೈಗೆ ಬಟ್ಟೆ ಕಟ್ಟಿ, ಬೊಲೆರೋ ವಾಹನದಲ್ಲಿ ಅಪಹರಿಸಿಕೊಂಡು ಹೋಗಿದ್ದಾರೆ.
ನಂತರ ಹುಬ್ಬಳ್ಳಿಯ ಗಬ್ಬೂರ್ ಕ್ರಾಸ್ ವರೆಗೆ ಕರೆದೊಯ್ದು, ಚಾಲಕ ಅಬ್ದುಲ್ ಬಳಿಯಿದ್ದ 22 ಸಾವಿರ ರೂಪಾಯಿ ದೋಚಿಕೊಂಡು, ರಸ್ತೆಯಲ್ಲಿ ಇಳಿಸಿ ದರೋಡೆಕೋರರು ಬೊಲೆರೋ ವಾಹನದಲ್ಲಿಯೇ ಪರಾರಿಯಾಗಿದ್ದಾರೆ. ಬೊಲೆರೋ ಜೀಪು ಹುಬ್ಬಳ್ಳಿಯಿಂದಲೇ ಬೆನ್ನು ಹತ್ತಿ ಬಂದಿದೆ ಎಂದು ಹೇಳಲಾಗುತ್ತಿದೆ.
ದುಷ್ಕರ್ಮಿಗಳು ಹಿಂದಿಯಲ್ಲಿ ಮಾತನಾಡುತ್ತಿದ್ದರು. ಬಿಳಿ ಬಣ್ಣದ ಬೊಲೆರೋ ಜೀಪು ಎಂದು ಚಾಲಕ ಅಬ್ದುಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಘಟನೆಯ ಬಗ್ಗೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿ.ಎಸ್.ಐ ಎನ್.ಡಿ.ಜಕ್ಕಣ್ಣವರ ತನಿಖೆ ಕೈಗೊಂಡಿದ್ದಾರೆ.