
ಯಲ್ಲಾಪುರ: ತಾಲೂಕಿನಲ್ಲಿ ಅತಿವೃಷ್ಠಿಯಿಂದ ಕಳಚೆ, ವಜ್ರಳ್ಳಿ ಭಾಗ ಸೇರಿದಂತೆ ಅನೇಕ ಕಡೆಗಳಲ್ಲಿ ರಸ್ತೆ, ಸೇತುವೆ, ಸುಮಾರು 50 ಕ್ಕೂ ಹೆಚ್ಚಿನ ಮನೆಗಳು ಹಾನಿಗೊಳಗಾಗಿದೆ. ಅಡಿಕೆ ತೋಟ ಜಲಾವೃತವಾಗಿ ಫಲವತ್ತತೆ ಕೊಚ್ಚಿ ಹೋಗಿದೆ. ಮಣ್ಣಿನಿಂದ ಮುಚ್ಚಿ ಹೋಗಿದೆ. ಕಾರಣ ಡಿಸಿಯಿಂದ ವರದಿ ತರಿಸಿಕೊಂಡು ಮನೆ ಕಳಕೊಂಡವರಿಗೆ ಪುನರ್ವಸತಿ, ತೋಟಗದ್ದೆ ಹಾನಿಯಾದ ರೈತರಿಗೆ ಪರಿಹಾರ ಕೊಡಬೇಕೆಂದು ರೈತಮುಖಂಡ ಪಿ.ಜಿ.ಭಟ್ಟ ಬರಗದ್ದೆ ಆಗ್ರಹಿಸಿದ್ದಾರೆ.
ಅವರು ಯಲ್ಲಾಪುರಕ್ಕೆ ಸಿ.ಎಂ ಬಸವರಾಜ ಬೊಮ್ಮಾಯಿ ಬಂದ ಸಂದರ್ಭದಲ್ಲಿ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಉ.ಕ ಹಾಗೂ ಶಿವಮೊಗ್ಗಾ ಜಿಲ್ಲೆಯ ಅಡಿಕೆ ಬೆಳೆಯುವ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅಡಿಕೆಯನ್ನೇ ನಂಬಿ, ಬೆಳೆಗಾರರು, ಕೃಷಿ ಕೂಲಿ ಕಾರ್ಮಿಕರು, ಸಂಸ್ಕರಣದಾರರು, ವ್ಯಾಪಾರಸ್ಥರು ಸೇರಿ ಲಕ್ಷಾಂತರ ಜನ ಜೀವನ ಸಾಗಿಸುತ್ತಿದ್ದಾರೆ. ದೇಶದಲ್ಲಿ ಬೇಕಾದಷ್ಟು ಅಡಿಕೆ ಬೆಳೆಯುತ್ತಿದ್ದು, ಬೇರೆ ದೇಶಗಳಿಂದ ಕಳ್ಳದಾರಿಯಲ್ಲಿ ಅಡಿಕೆ ಆಮದಾಗುವುದನ್ನು ತಡೆಯಲು ಅಡಿಕೆ ಟಾಸ್ಕಪೆÇೀರ್ಸ ರಚನೆ ಮಾಡಲಾಗಿದೆ. ರಾಜ್ಯ ಸರ್ಕಾರ ಹಾಗೂ ಅಡಿಕೆ ಕಾರ್ಯಪಡೆ ಸೇರಿ ಕೇಂದ್ರದ ಮೇಲೆ ಒತ್ತಡ ತಂದು ಅಡಿಕೆ ಆಮದು ನಿಷೇಧಿಸಲು ಒತ್ತಡ ಹೇರಬೇಕು. ಮತ್ತು ಬೆಲೆ ಸ್ಥಿರತೆ ಕಾಯ್ದು ಕೊಳ್ಳಬೇಕು.
ತಾಲೂಕಿನಲ್ಲಿ ಲೊಕೋಪಯೋಗಿ ಹಾಗೂ ಜಿ.ಪಂ ರಸ್ತೆಗಳು ಹದಗೆಟ್ಟು, ನಾಲ್ಕೈದು ವರ್ಷಗಳಿಂದ ರಿಪೇರಿ ಆಗದೇ ಹೊಂಡಬಿದ್ದು ವಾಹನ ಓಡಾಡುವ ಪರಿಸ್ಥಿತಿ ಇಲ್ಲ. ಶಾಸಕರು ಪ್ರಯತ್ನಪಟ್ಟರೂ, ಕೊರೊನಾ ಕಾರಣ ಅಭಿವೃದ್ದಿ ನಿರ್ವಹಣೆಗೆ ಹಿನ್ನಡೆ ಆಗಿದೆ. ಕಾರಣ ಹೊಂಡಬಿದ್ದ ರಸ್ತೆ ನಿರ್ವಹಣೆ ಮತ್ತು ಬೇಸಿಗೆಯಲ್ಲಿ ರಸ್ತೆಗಳ ನವೀಕರಣಕ್ಕೆ ಅನುದಾನ ನೀಡಬೇಕೆಂದು ಆಗ್ರಹಿಸಿದರು.