ಅಂಕೋಲಾ: ಪ್ರವಾಹದಿಂದ ಹಾನಿಗೊಳಗಾಗಿರುವ ಉತ್ತರಕನ್ನಡ ಜಿಲ್ಲೆಗೆ 200ಕೋಟಿ ರೂಪಾಯಿಗಳ ಪರಿಹಾರವನ್ನು ನೂತನ ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಜಿಲ್ಲೆಯ ಪ್ರವಾಹ ಪರಿಶೀಲನೆ ನಡೆಸಿದ ಅವರು ಅಂಕೋಲಾದಲ್ಲಿ ಪರಿಹಾರವನ್ನು ಘೋಷಣೆ ಮಾಡಿದ್ದಾರೆ.
ಮಳೆಯಿಂದಾಗಿ ಮನೆಕಳೆದುಕೊಂಡವರಿಗೆ ಅತಿಕ್ರಮಣದಾರರನ್ನೂ ಸೇರಿ ಕಳೆದ ಬಾರಿಯಂತೆ 10ಸಾವಿರ ರೂ. ತುರ್ತುಹಣವನ್ನು ಬಿಡುಗಡೆ ಮಾಡುವಂತೆ ಸೂಚಿಸಿದ್ದಾರೆ.
ಪೂರ್ಣ ಮನೆಬಿದ್ದವರಿಗೆ 5ಲಕ್ಷ ರೂಪಾಯಿ ಭಾಗಶಃ ಹಾನಿಗೊಳಗಾದವರಿಗೆ 3ಲಕ್ಷ ಹಾಗೂ ಸ್ವಲ್ಪ ಹಾನಿಗೊಳಗಾದವರಿಗೆ 50ಸಾವಿರ ಪರಿಹಾರ ಕೊಡುವಂತೆ ಆದೇಶ ನೀಡಿದ್ದಾರೆ.
ಅರಬೈಲ್ ರಸ್ತೆಕುಸಿತ ಹಾಗೂ ಕಳಚೆ ಭೂಕುಸಿತ ಪ್ರದೇಶಕ್ಕೆ ರಸ್ತೆ ನಿರ್ಮಾಣ ಮಾಡಲು 10ಕೋಟಿ ರೂ. ತುರ್ತು ಹಣ ಬಿಡುಗಡೆ ಮಾಡಲು ಸೂಚಿಸಿದ್ದಾರೆ.
ಲೋಕೊಪಯೋಗಿ ಇಲಾಖೆವತಿಯಿಂದ 100ಕೋಟಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆ ವತಿಯಿಂದ 100ಕೋಟಿ ಹಣ ಬಿಡುಗಡೆ ಮಾಡುವುದಾಗಿ ಸಿಎಂ ಘೋಷಣೆ ಮಾಡಿದ್ದಾರೆ.
ಹಾಗೂ ಕಳಚೆ ಭಾಗದಲ್ಲಿ ಭೂಕುಸಿತದಿಂದಾಗಿ ಪುನರ್ನಿಮಾಣ ಕಾರ್ಯ ಸಾಧ್ಯವಿಲ್ಲದಿರುವುದರಿಂದ ಸಂಪೂರ್ಣವಾಗಿ ಸ್ಥಳಾಂತರ ಗೊಳಿಸಲು 15ಎಕರೆ ಪ್ರದೇಶವನ್ನು ಗುರುತಿಸುವಂತೆ ಮುಖ್ಯಮಂತ್ರಿ ಬೊಮ್ಮಾಯಿ ಜಿಲ್ಲಾಧಿಕಾರಿ ಯವರಿಗೆ ಆದೇಶ ನೀಡಿದ್ದಾರೆ.
ಅತಿವೃಷ್ಟಿಯಿಂದ ಸಂಕಷ್ಟದಲ್ಲಿರುವ ಜಿಲ್ಲೆಗೆ 200ಕೋಟಿ ಪರಿಹಾರ ಘೋಷಿಸಿರುವ ಅವರ ಈ ಕಾರ್ಯಕ್ಕೆ ಶಾಸಕ ಶಿವರಾಮ್ ಹೆಬ್ಬಾರ್ ಸೇರಿದಂತೆ ಜಿಲ್ಲೆಯ ಶಾಸಕರು ಹಾಗೂ ಜನತೆ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ