
ಶಿರಸಿ: ತಾಲೂಕಿನ ಪುಟ್ಟನಮನೆಯ ಪರಮೇಶ್ವರ ಅನಂತ ಭಟ್ಟ ಎಂಬ ವ್ಯಕ್ತಿಯೊಬ್ಬರನ್ನು ನಂಬಿಸಿ 2 ಲಕ್ಷದ 91 ಸಾವಿರ ರೂಪಾಯಿ ಹಣ ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡಿದ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬ್ಯಾಂಕ್ ಖಾತೆಗೆ ಕೆವೈಸಿ ಅಪಡೇಟ್ ಮಾಡಬೇಕೆಂದು ನಂಬಿಸಿ ವ್ಯಕ್ತಿಯೋರ್ವ ಖಾತೆಯಿಂದ ಹಣ ಎಗರಿಸಿದ್ದಾನೆ ಎನ್ನಲಾಗಿದೆ. ಪರಮೇಶ್ವರನಿಗೆ ನಾನು ಎಸ್‍ಬಿಐ ಅಧಿಕಾರಿ ಎಂದು ಒಬ್ಬ ಕರೆ ಮಾಡಿ, ನಿಮ್ಮ ಖಾತೆಯ ಕೆವೈಸಿ ಅಪ್‍ಡೇಟ್ ಮಾಡಬೇಕು. ಇಲ್ಲದಿದ್ರೆ ನಿಮ್ಮ ಖಾತೆ ಬ್ಲಾಕ್ ಆಗುತ್ತದೆ ಎಂದು ಹೆದರಿಸಿ, ಪರಮೇಶ್ವರ ಅನಂತ ಭಟ್ಟ ಅವರಿಂದ ಓಟಿಪಿ ಪಡೆದು ಮೋಸ ಮಾಡಿದ್ದಾನೆ.
ತಾನು ಬ್ಯಾಂಕ್ ಅಧಿಕಾರಿ ಎಂದು ಹೇಳಿದ ವ್ಯಕ್ತಿಯ ಮಾತನ್ನು ನಂಬಿದ ಪರಮೇಶ್ವರ ಭಟ್ಟ ಅವರು ತಮ್ಮ ಬ್ಯಾಂಕ್ ಖಾತೆ ನಂಬರ್ ನೀಡಿದ್ದಾರೆ. ಅಲ್ಲದೆ, ಓಟಿಪಿ ನಂಬರ್ ಕೂಡಾ ಕೊಟ್ಟಿದ್ದಾರೆ. ಬಳಿಕ ಬ್ಯಾಂಕ್ ಖಾತೆ ಪರಿಶೀಲನೆ ನಡೆಸಿದಾಗ ಮೋಸ ಹೋಗಿರುವುದು ತಿಳಿದು ಬಂದಿದೆ.
ಈ ರೀತಿ ಪ್ರಕರಣಗಳು ಪುನರಾವರ್ತನೆ ಆಗುತ್ತಿದ್ದು, ಜನರು ಈ ರೀತಿಯ ಕರೆಗಳನ್ನು ನಂಬಿ ಮೋಸ ಹೋಗುತ್ತಿರುವ ಬಗ್ಗೆ ಅಧಿಕಾರಿಗಳೂ ಬೇಸರ ವ್ಯಕ್ತಪಸಿದ್ದಾರೆ. ಜನತೆ ಎಚ್ಚರಿಕೆ ವಹಿಸಬೇಕಾದ ಅಗತ್ಯತೆ ಇದೆ ಎನ್ನಲಾಗಿದೆ.