
ಯಲ್ಲಾಪುರ: ವಿಶ್ವದರ್ಶನ ಸೇವಾ ತಂಡದ ವತಿಯಿಂದ ಬುಧವಾರ ಅತಿವೃಷ್ಠಿ ಹಾಗೂ ಪ್ರವಾಹ ಪೀಡಿತ ಪ್ರದೇಶಗಳಾದ ಕಲ್ಲೇಶ್ವರ ಮತ್ತು ಕಳಚೆ ಗ್ರಾಮಕ್ಕೆ ತೆರಳಿ ಸ್ವಚ್ಚತಾ ಕೆಲಸಗಳನ್ನು ನಿರ್ವಹಿಸಲಾಯಿತು.
ಪ್ರವಾಹ ಪೀಡಿತ ಪ್ರದೇಶದಲ್ಲಿನ ರಸ್ತೆ ಬದಿ, ದೇವಸ್ಥಾನ ಒಳ ಆವರಣ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಅಪಾರ ಪ್ರಮಾಣದಲ್ಲಿ ತ್ಯಾಜ್ಯ ಹಾಗೂ ಮಣ್ಣು ತುಂಬಿಕೊಂಡಿದ್ದು ಅವುಗಳನ್ನು ವಿಶ್ವದರ್ಶನ ಸೇವಾ ತಂಡದ ಸದಸ್ಯರು ಸ್ವಚ್ಛ ಮಾಡಿದರು. ಕಳೆದ ಐದು ದಿನಗಳಿಂದ ವಿಶ್ವದರ್ಶನ ಸೇವಾ ತಂಡದವರು ಅತಿವೃಷ್ಟಿ ಹಾಗೂ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಅಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಗುಡ್ಡ ಕುಸಿತ ಉಂಟಾದ ಪ್ರದೇಶಗಳಲ್ಲಿ ಅಗತ್ಯ ನೆರವು ನೀಡುವುದು, ರಸ್ತೆ ಸಂಪರ್ಕ ಕಡಿತಗೊಂಡ ಪ್ರದೇಶಗಳಲ್ಲಿ ತಾತ್ಕಾಲಿಕ ರಸ್ತೆ ನಿರ್ಮಾಣ, ಕೆರೆ ನೀರು ನುಗ್ಗಿ ಹಾನಿ ಮಾಡಬಹುದಾದ ಪ್ರದೇಶದಲ್ಲಿ ಬದಲಿ ಕಾಲುವೆ ನಿರ್ಮಾಣ, ರಕ್ಷಣಾ ಕಾರ್ಯದಲ್ಲಿ ತೊಡಗಿದವರಿಗೆ ಹಾಗೂ ಸಂತ್ರಸ್ತರಿಗೆ ಊಟದ ವ್ಯವಸ್ಥೆ ಮಾಡುವುದು ಮೊದಲಾದ ಕೆಲಸಗಳನ್ನು ವಿಶ್ವದರ್ಶನ ಸೇವಾ ತಂಡ ನಿರ್ವಹಿಸಿದೆ. ಇದಲ್ಲದೇ ಸಂತ್ರಸ್ಥರಿಗೆ ಅಗತ್ಯ ಸಾಮಗ್ರಿಗಳ ಪೂರೈಕೆ, ಜಾನುವಾರುಗಳ ಅಂತ್ಯಕ್ರಿಯೆ ಮೊದಲಾದ ಸೇವಾ ಕಾರ್ಯದಲ್ಲಿ ವಿಶ್ವದರ್ಶನ ಸೇವಾ ತಂಡ ಸಂಪೂರ್ಣವಾಗಿ ತೊಡಗಿಕೊಂಡಿದೆ. ಪ್ರಸ್ತುತ ನೆರೆ, ಪ್ರವಾಹ ಕಡಿಮೆಯಾಗಿದ್ದು, ಎಲ್ಲೆಡೆ ವ್ಯಾಪಕ ಪ್ರಮಾಣದಲ್ಲಿ ತ್ಯಾಜ್ಯ ತುಂಬಿಕೊಂಡಿದೆ. ಈ ಬಗ್ಗೆ ಗ್ರಾಮಸ್ಥರ ಅಳಲು ಆಲಿಸಿದ ವಿಶ್ವದರ್ಶನ ಸೇವಾ ತಂಡದ ಸದಸ್ಯರು ಎರಡು ತಂಡಗಳ ಮೂಲಕ ಗ್ರಾಮೀಣ ಭಾಗಗಳಿಗೆ ತೆರಳಿ ಅಲ್ಲಿ ಸ್ವಚ್ಚತಾ ಕಾರ್ಯ ನಡೆಸಿದರು.
ವಿಶ್ವದರ್ಶನ ಇಡಗುಂದಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಪ್ರಸನ್ನ ಹೆಗಡೆ, ಶಿಕ್ಷಕ ರಾಘವೇಂದ್ರ ಹೆಗಡೆ ನೇತೃತ್ವದ ತಂಡದ ಸದಸ್ಯರು ಗೋಪಾಲಕೃಷ್ಣ ದೇವಸ್ಥಾನಕ್ಕೆ ತೆರಳಿ ಅಲ್ಲಿನ ಸಭಾ ಭವನ, ಹೊರ ಆವರಣವನ್ನು ಸ್ವಚ್ಚ ಮಾಡಿದರು. ಚಲ್ಲಾಪಿಲ್ಲಿಯಾಗಿ ಬಿದ್ದಿದ್ದ ಖುರ್ಚಿಗಳನ್ನು ಸ್ವಚ್ಚಗೊಳಿಸಿ ಸರಿಪಡಿಸಿದರು. ಕಲ್ಲೇಶ್ವರದಲ್ಲಿ ಗೋಪಾಲಕೃಷ್ಣ ಯುವ ಸೇವಾ ಸಂಸ್ಥೆ ಹಾಗೂ ಶಾರದಾಂಬಾ ಯುವತಿ ಮಂಡಳದವರು ಸ್ವಚ್ಚತಾ ಕಾರ್ಯದಲ್ಲಿ ಭಾಗಿಯಾಗಿದ್ದರು. ಗ್ರಾಮದ ಪ್ರಮುಖರಾದ ಪ್ರಭಾಕರ ಕೋಟೆಮನೆ, ರಾಘವೇಂದ್ರ ಭಟ್ಟ, ರಾಮಕೃಷ್ಣ ಗಾಂವ್ಕರ್, ಸುಮಾ ಹೆಗಡೆ, ದೇವಕಿ ಭಟ್ಟ, ಸಹನಾ ಗಾಂವ್ಕರ್, ಸ್ಮಿತಾ ಭಟ್ಟ, ವಿಶ್ವದರ್ಶನ ಸಂಸ್ಥೆಯ ಗುರುರಾಜ್ ಕುಂದಾಪುರ ಇತರರು ಇದ್ದರು. ಎಂ.ಆರ್ ಭಟ್ಟ ನೇತೃತ್ವದ ಇನ್ನೊಂದು ತಂಡದ ಸದಸ್ಯರು ಕಳಚೆ ಗ್ರಾಮಕ್ಕೆ ತೆರಳಿ ಅಲ್ಲಿ ರಸ್ತೆ ನಿರ್ಮಾಣ ಸೇವಾ ಕಾರ್ಯ ನಡೆಸಿದರು.