ಸಿದ್ದಾಪುರ: ತಾಲೂಕಿನ ಅವರಗುಪ್ಪದಲ್ಲಿರುವ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ನೂತನ ತಾಂತ್ರಿಕ ಕೇಂದ್ರದ (ವರ್ಕ್ ಶಾಪ್) ಕಟ್ಟಡದ ಉದ್ಘಾಟನೆ ಹಾಗೂ ಸರಕಾರಿ ಪಾಲಿಟೆಕ್ನಿಕ್ನಲ್ಲಿ ನೂತನವಾಗಿ ನಿರ್ಮಾಣ ಮಾಡಿದ 7 ಹೆಚ್ಚುವರಿ ಕೊಠಡಿಗಳ ಉದ್ಘಾಟನೆ ಹಾಗೂ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲೀಷ್ ಹಾಗೂ ವ್ಯಕ್ತಿತ್ವ ವಿಕಸನ ತರಬೇತಿಯ ಉದ್ಘಾಟನೆಯನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನೆರವೇರಿಸಿದರು.
ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಶಿಕ್ಷಕರ ಜವಾಬ್ದಾರಿ, ಅದನ್ನು ಸರಿಯಾಗಿ ನಿಭಾಯಿಸಬೇಕು. ಅದರಂತೆ ವಿದ್ಯಾರ್ಥಿಗಳೂ ಸಹ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಒಳ್ಳೆಯ ಶಿಕ್ಷಣ ಪಡೆದು ತಮ್ಮ ಉತ್ತಮ ಜೀವನಕ್ಕೆ ಹಾಗೂ ರಾಷ್ಟ್ರದ ಭದ್ರಬುನಾದಿಗೆ ಕಾರಣರಾಗಬೇಕು ಎಂದು ಹೇಳಿದರು.
ಯುವಕರು ತಮ್ಮ ವೈಯಕ್ತಿಕ ಜೀವನ ರೂಪಿಸಿಕೊಳ್ಳಲು ಸರಕಾರ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ. ಅದರಲ್ಲಿಯೂ ತಾಂತ್ರಿಕತೆಯಲ್ಲಿ ಸಾಕಷ್ಟು ಹೊಸ ಹೊಸ ವಿಷಯಗಳನ್ನು ಕಲ್ಪಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಇವುಗಳ ಸದುಪಯೋಗ ಪಡೆದು ಉತ್ತಮ ಜೀವನ ರೂಪಿಸಿಕೊಂಡರೆ ಅದು ರಾಷ್ಟ್ರದ ಅಭಿವೃದ್ಧಿಗೆ ಸಹಾಯಕವಾಗುತ್ತದೆ. ವಿದ್ಯಾರ್ಥಿ ನಿಲಯಗಳಲ್ಲಿ ಈ ವರ್ಷದಿಂದ ಸ್ಪೋಕನ್ ಇಂಗ್ಲೀಷ ಹಾಗೂ ವ್ಯಕ್ತಿತ್ವ ವಿಕಸನ ತರಬೇತಿ ಪ್ರಾರಂಭಿಸುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಕಾಲೇಜುಗಳಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಇನ್ನೂ ಅಭಿವೃದ್ದಿ ಕಾರ್ಯಗಳು ಆಗಬೇಕಾಗಿದ್ದು, ಸರಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೋಲಸಿರ್ಸಿ ಪಂಚಾಯತಿ ಉಪಾಧ್ಯಕ್ಷ ವಿನಾಯಕ ಕೆ.ಆರ್., ಸದಸ್ಯರಾದ ಗೋವಿಂದ ನಾಯ್ಕ, ಆನಂದ ಮಡಿವಾಳ, ಮಹಾಬಲೇಶ್ವರ ನಾಯ್ಕ, ಗಣಪತಿ ಗೊಂಡ, ಪಟ್ಟಣ ಪಂಚಾಯತಿ ಸದಸ್ಯರಾದ ಗುರುರಾಜ ಶಾನಭಾಗ, ಮಂಜುನಾಥ ಭಟ್ಟ, ಸುರೇಶ ನಾಯ್ಕ, ರಾಜೇಂದ್ರ ಕಿಂದ್ರಿ, ಪ್ರಮುಖರಾದ ಪ್ರಸನ್ನ ಹೆಗಡೆ, ತಿಮ್ಮಪ್ಪ ಎಮ್.ಕೆ. ಗೋಪಾಲ ನಾಯ್ಕ ಮಾದೇವ ನಾಯ್ಕ, ಪ್ರಶಾಂತ ಗೌಡರ್, ಕಾಲೇಜುನ ಪ್ರಾಂಶುಪಾಲ ಎಮ್.ಎ.ಹೆಗಡೆ, ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಶಾಂತರಾಮ, ತಾಲೂಕಾ ಬಿಸಿಎಮ್ ಸಹಾಯಕ ನಿರ್ದೇಶಕ ಕೆ.ಕೆ.ಗಣಪತಿ, ಪಿಎಎಸ್ಐ ಮಹಾಂತೇಶ, ವಿದ್ಯಾರ್ಥಿಗಳು ಹಾಗೂ ಊರಿನ ಗ್ರಾಮಸ್ಥರು ಇದ್ದರು.